ಕರ್ನಾಟಕ

karnataka

ETV Bharat / state

86ನೇ ಕನ್ನಡ ಸಾಹಿತ್ಯ ಸಮ್ಮೇಳನ : ಗೋಷ್ಠಿಗಳ ವಿಷಯ ರಚನೆ, ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗೆ ಸಭೆ

86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳ ವಿಷಯ ರಚನೆ ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯ ಸಂಬಂಧ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಮೊದಲ ಸಭೆ ನಡೆಸಲಾಯಿತು.

86th-kannada-literature-conference-first-meeting-held-in-banglore
86ನೇ ಕನ್ನಡ ಸಾಹಿತ್ಯ ಸಮ್ಮೇಳನ : ಗೋಷ್ಠಿಗಳ ವಿಷಯ ರಚನೆ ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗೆ ಸಭೆ

By

Published : Sep 17, 2022, 9:48 PM IST

ಬೆಂಗಳೂರು : ಹಾವೇರಿಯಲ್ಲಿ ನವೆಂಬರ್ 11, 12 ಮತ್ತು 13ರಂದು ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳ ವಿಷಯ ರಚನೆ ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಸಮಿತಿಯ ಸಭೆ ಇಂದು ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಿತು.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಗಣ್ಯರಾದ ಡಾ. ಪ್ರಧಾನ ಗುರುದತ್ತ, ಎಸ್.ಬಿ. ರಂಗನಾಥ, ಡಾ. ಶುಭಚಂದ್ರ, ತಿ ಪೂರ್ಣಿಮಾ ಸುರೇಶ, ಡಾ. ಇಕ್ಬಾಲ್ ಅಹಮದ್, ಡ್ಯಾನಿ ಪಿರೇರಾ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಿ. ಶಿವಲಿಂಗೇಗೌಡ, ಡಾ. ಶಿವಾನಂದ ಕೆಳಗಿನಮನಿ, ಡಾ. ನಾ. ದಾಮೋದರ ಶೆಟ್ಟಿ, ಪ್ರೊ. ಅಶ್ವತ್ಥನಾರಾಯಣ, ಡಾ. ಬಿ.ಕೆ. ರವಿ, ಡಾ. ಪದ್ಮಿನಿ ನಾಗರಾಜು, ಡಾ. ತಲಕಾಡು ಚಿಕ್ಕರಂಗೇಗೌಡ, ಸತೀಶ್ ಕುಲಕರ್ಣಿ, ಶೋಭಾ ಎಚ್.ಜಿ., ವಾಣಿ ನಾಯ್ಡು, ಕನ್ನಡ ವಿವಿ ಕುಲಪತಿ ಪ್ರೊ. ಸ.ಚಿ. ರಮೇಶ, ಜಾನಪದ ವಿವಿ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ, ಸಂಗೀತ ವಿವಿ ಕುಲಪತಿ ಪ್ರೊ. ನಾಗೇಶ ಬೆಟ್ಟಕೋಟೆ, ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಕೆ. ಮಹಾಲಿಂಗಯ್ಯ, ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್‌ಪಾಂಡು, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳ ವಿಷಯ ರಚನೆ ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಸಮಿತಿಯ ಮೊದಲ ಸಭೆ ಇದಾಗಿದ್ದು, ಸಮ್ಮೇಳನದಲ್ಲಿ ಹಮ್ಮಿಕೊಳ್ಳಬೇಕಿದ್ದ ಗೋಷ್ಠಿಗಳ ವಿಷಯ ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಕುರಿತು ವಿವರವಾದ ಚರ್ಚೆ ನಡೆಯಿತು.

ಕನಕ ಸರ್ವಜ್ಞ ಶರೀಫರ ವಿಶೇಷ ಗೋಷ್ಠಿ :ಹಾವೇರಿಯು ಕನಕ-ಸರ್ವಜ್ಞ-ಶರೀಫರ ಪುಣ್ಯಭೂಮಿಯಾಗಿರುವ ಹಿನ್ನೆಲೆಯಲ್ಲಿ ಅವರ ಕುರಿತ ವಿಶೇಷ ಗೋಷ್ಠಿಯೊಂದಿಗೆ ಸಮ್ಮೇಳನ ಆರಂಭ ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ಇದರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಹಾವೇರಿಯ ಪಾತ್ರ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡ ಸಾಹಿತ್ಯದ ಪಾತ್ರ, ಹೈದರಾಬಾದ್ ಕರ್ನಾಟಕದ ವಿಮೋಚನಾ ಹೋರಾಟ ನಡೆದ ದಾರಿ, ಗಡಿ ಕರ್ನಾಟಕ ಸಮಸ್ಯೆಗಳು ಮತ್ತು ಪರಿಹಾರ, ಅನುವಾದ ಸಾಹಿತ್ಯದಲ್ಲಿ ಕನ್ನಡ ಭಾಷೆಯಿಂದ ಇತರ ಭಾಷೆ ಹಾಗೂ ಇತರ ಭಾಷೆಗಳಿಂದ ಕನ್ನಡಕ್ಕೆ ಕೊಡುಗೆ, ಆರೋಗ್ಯ, ಜಾನಪದ ವೈವಿಧ್ಯ, ಕೃಷಿ, ಮಹಿಳೆ, ನೈಸರ್ಗಿಕ ವಿಪತ್ತು, ಕವಿಗೋಷ್ಠಿ, ಸನ್ಮಾನ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಹಾವೇರಿ ಜಿಲ್ಲಾ ದರ್ಶನ, ಕನ್ನಡದ ಅಸ್ಮಿತೆಯ ಸವಾಲುಗಳು, ಮಾಧ್ಯಮ ಮತ್ತು ಹೊಸ ಆವಿಷ್ಕಾರಗಳು, ಕರೋನಾ ತಂದ ಆವಿಷ್ಕಾರ, ರಾಷ್ಟ್ರೀಯ ಶಿಕ್ಷಣ ನೀತಿಯ ಅರಿವು ಮತ್ತು ಅನುಷ್ಠಾನ, ಕನ್ನಡ ಸಾಹಿತ್ಯಕ್ಕೆ ಯುವಸ್ಪಂದನ, ನಾಡಿನ ಸಾಕ್ಷಿಪ್ರಜ್ಞೆಯ ಸಂಸ್ಥೆಗಳು ಸೇರಿದಂತೆ ಹಲವು ವಿಷಯಗಳನ್ನು ಗೋಷ್ಠಿಯಲ್ಲಿ ಸೇರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿಷಯ ತಜ್ಞರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನ : ನಾಡಿನ ಎಲ್ಲ ಪ್ರದೇಶ, ಸಾಮಾಜಿಕ ನ್ಯಾಯ, ಮಹಿಳಾ ಮತ್ತು ಯುವಕರಿಗೆ ಪ್ರಾತಿನಿಧ್ಯ ಸೇರಿದಂತೆ ಸೂಕ್ತ ವಿಷಯ ತಜ್ಞರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು. ಸಮ್ಮೇಳನದ ಗೋಷ್ಠಿಗಳ ಮಹತ್ವ ಹೆಚ್ಚಿಸಲು ಪ್ರಧಾನ ವೇದಿಕೆಯ ಜೊತೆ ಸಮಾನಾಂತರ ವೇದಿಕೆಯೆನ್ನದೆ ಮೂರೂ ವೇದಿಕೆಗಳಿಗೂ ಸಮಾನ ಮಹತ್ವ ನೀಡುವ ಹಿನ್ನೆಲೆಯಲ್ಲಿ ವೇದಿಕೆ-1, ವೇದಿಕೆ-2 ಮತ್ತು ವೇದಿಕೆ-3 ಎಂದು ಸಂಬೋಧಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಸಾಧ್ಯವಿರುವ ಎಲ್ಲ ವಿಷಯಗಳ ಅಳವಡಿಕೆ : ಸಾಹಿತ್ಯ, ಪರಂಪರೆ, ಸಂಸ್ಕೃತಿ, ಶೈಕ್ಷಣಿಕ, ಆರೋಗ್ಯ, ಜಾನಪದ, ಕನ್ನಡ ಶಾಲೆಗಳ ಉಳಿವು, ಕನ್ನಡ ಅನ್ನದ ಭಾಷೆಯಾಗುವ ನಿಟ್ಟಿನಲ್ಲಿ ಜನಮುಖಿಯಾಗಲು ಸಾಧ್ಯವಿರುವ ಎಲ್ಲ ವಿಷಯಗಳನ್ನು ಸಮ್ಮೇಳನದ ಮೂರು ದಿನಗಳಲ್ಲಿ ಅರ್ಥಪೂರ್ಣವಾಗಿ ಅಳವಡಿಸಿಕೊಳ್ಳಲು ನಿರ್ಣಯಿಸಲಾಯಿತು.

ಇದನ್ನೂ ಓದಿ :ನಿವೇಶನ ಕಬಳಿಕೆ ಆರೋಪ: ಬಿಜೆಪಿ ಶಾಸಕ ಚಂದ್ರಪ್ಪ ವಿರುದ್ಧ ಲೋಕಾಯುಕ್ತಕ್ಕೆ ಆಪ್​​ ದೂರು

ABOUT THE AUTHOR

...view details