ಕರ್ನಾಟಕ

karnataka

ETV Bharat / state

Plastic waste: ಕರಾವಳಿ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣಕ್ಕೆ ₹840 ಕೋಟಿ; ವಿಸ್ತೃತ ವರದಿ ನೀಡಲು ಅಧಿಕಾರಿಗಳಿಗೆ ಖಂಡ್ರೆ ಸೂಚನೆ - ಬ್ಲೂ ಪ್ಯಾಕ್ ಯೋಜನೆಯ ಒಟ್ಟು ಮೊತ್ತ 840 ಕೋಟಿ

Plastic waste control: ಕರಾವಳಿ ಕಡಲ ತೀರದಲ್ಲಿನ ಪ್ಲಾಸ್ಟಿಕ್​ ತ್ಯಾಜ್ಯ ನಿಯಂತ್ರಣಕ್ಕೆ 840 ಕೋಟಿ ರೂಪಾಯಿ ಯೋಜನೆ ರೂಪಿಸಲಾಗಿದ್ದು, ಈ ಬಗ್ಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

840-crore-for-coastal-plastic-waste-control
ಕರಾವಳಿಯ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣಕ್ಕೆ 840 ಕೋಟಿ ರೂ. ಯೋಜನೆ : ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ

By

Published : Aug 8, 2023, 6:30 PM IST

ಬೆಂಗಳೂರು: ಕಡಲೊಡಲು ಸೇರುತ್ತಿರುವ ಮತ್ತು ತೀರವನ್ನು ಆವರಿಸುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ಹಲವು ಜಲಚರಗಳ ಸಾವಿಗೆ ಕಾರಣವಾಗುತ್ತಿದೆ. ಈ ಪ್ಲಾಸ್ಟಿಕ್ ತ್ಯಾಜ್ಯಗಳು ಸಮುದ್ರ ಸೇರದಂತೆ ನಿಗ್ರಹಿಸುವ ಮತ್ತು ಪಶ್ಚಿಮಘಟ್ಟದ ಜೀವವೈವಿಧ್ಯ ಸಂರಕ್ಷಿಸುವ ನಿಟ್ಟಿನಲ್ಲಿ ವಿಶ್ವಬ್ಯಾಂಕ್ ಪ್ರಸ್ತಾಪಿತ ಕೆ.ಶೂರು–ಬ್ಲೂ ಪ್ಯಾಕ್ ಯೋಜನೆಗೆ ಸಮರ್ಪಕವಾದ ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್) ಸಿದ್ಧಪಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಅವರು ಪರಿಸರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ಹಿರಿಯ ಪರಿಸರ ಅರ್ಥಶಾಸ್ತ್ರಜ್ಞ ಮತ್ತು ಕಾರ್ಯ ಗುಂಪಿನ ನಾಯಕ ಪಾಬ್ಲೋ ಸಿ ಬೆನಿಟೆಜ್ ನೇತೃತ್ವದ ವಿಶ್ವಬ್ಯಾಂಕ್ ನಿಯೋಗದೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, 317 ಕಿಲೋ ಮೀಟರ್ ಕರುನಾಡ ಕರಾವಳಿಯಲ್ಲಿ ಪ್ರತಿನಿತ್ಯ 50 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿದೆ ಎಂಬುದು ಆಘಾತಕಾರಿ ಅಂಶ. ಇದರಿಂದ ಸಮುದ್ರ ತಟಕ್ಕೆ ಬಂದು ಮೊಟ್ಟೆ ಇಟ್ಟು ಮರಿ ಮಾಡುವ ಆಮೆ ಮೊದಲಾದ ಜಲಚರಗಳ ಸಂತಾನೋತ್ಪತ್ತಿಗೆ ಬಾಧಕವಾಗುತ್ತಿದೆ ಎಂಬ ಅಂಶದ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಮಾನವರ ಮತ್ತು ಸಮಸ್ತ ಜೀವಸಂಕುಲದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿರುವ ಏಕ ಬಳಕೆ ಪ್ಲಾಸ್ಟಿಕ್ ನಿಯಂತ್ರಿಸುವ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಿದೆ. ಕರುನಾಡ ಕರಾವಳಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗುತ್ತಿರುವ ದುಷ್ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ಈ ಯೋಜನೆ ಸಹಕಾರಿ ಆಗಬಹುದು ಎಂದು ತಿಳಿಸಿದರು.

ನಿಯೋಗದಲ್ಲಿದ್ದ ಸದಸ್ಯರು, ಕರಾವಳಿಯಲ್ಲಿರುವ ಮೀನುಗಾರರು, ಮೀನುಗಾರಿಕೆಗೆ ವಿರಾಮವಿದ್ದ ಸಂದರ್ಭದಲ್ಲಿ ಕಡಲತಡಿಯಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯ ತೆರವು ಮಾಡಬಹುದು. ಮೀನು ಹಿಡಿಯುವುದಕ್ಕಿಂತ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವೇ ಅವರಿಗೆ ಹೆಚ್ಚು ಲಾಭದಾಯಕ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬ್ಲೂ ಪ್ಯಾಕ್ ಯೋಜನೆಯು 840 ಕೋಟಿ ರೂ.ಮೊತ್ತದ ಯೋಜನೆ ಆಗಿದ್ದು, ಇದರಲ್ಲಿ ಶೇ.70ರಷ್ಟನ್ನು ವಿಶ್ವಬ್ಯಾಂಕ್ ಸಾಲದ ರೂಪದಲ್ಲಿ ನೀಡಲಿದೆ. ಉಳಿದ ಶೇ.30ರಷ್ಟು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಪ್ರಾಥಮಿಕ ಯೋಜನಾ ವರದಿ (ಪಿಪಿಆರ್)ಗೆ ನೀತಿ ಆಯೋಗ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಬೆಂಬಲವಿದೆ ಎಂದು ಅಧಿಕಾರಿಗಳು ವಿವರಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯ ಉನ್ನತಾಧಿಕಾರಿಗಳಾದ ಬ್ರಿಜೇಶ್ ಕುಮಾರ್ ದೀಕ್ಷಿತ್ ಮತ್ತು ವಿಜಯ ಮೋಹನ್ ರಾಜ್ ಮತ್ತಿತರರರು ಉಪಸ್ಥಿತರಿದ್ದರು.

ಇದನ್ನೂ ಓದಿ :ಚಲುವರಾಯಸ್ವಾಮಿ ಮಂತ್ರಿಯಾಗಿದ್ದನ್ನು ಕುಮಾರಸ್ವಾಮಿ ಸಹಿಸುತ್ತಿಲ್ಲ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ABOUT THE AUTHOR

...view details