ಬೆಂಗಳೂರು:ತಮಿಳುನಾಡಿನಿಂದ ನಗರಕ್ಕೆ ಬಂದು ಆನೆ ದಂತ ಮಾರಾಟ ಮಾಡುತ್ತಿದ್ದ ಐದು ಮಂದಿ ಅಂತಾರಾಜ್ಯ ಆರೋಪಿಗಳನ್ನು ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಗೋವಿಂದರಾಜು, ರಾಜೇಶ್, ಪ್ರಭಾಕರನ್, ನವೀನ್ ಹಾಗೂ ತಮಿಳುಸೆಲ್ವಂ ಬಂಧಿತ ಆರೋಪಿಗಳು. ಆರೊಪಿಗಳಿಂದ ಎರಡು ಆನೆಗಳ ದಂತ ವಶಕ್ಕೆ ಪಡೆದುಕೊಳ್ಳಲಾಗಿದೆ.
ಸಜ್ಜನ್ ಸರ್ಕಲ್ನ ಫುಡ್ ಸ್ಟ್ರೀಟ್ ಬಳಿ ಐವರು ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದರ ಕುರಿತು ಸ್ಥಳೀಯರಿಂದ ವಿಷಯ ತಿಳಿದ ಇನ್ಸ್ಪೆಕ್ಟರ್ ಶಿವಶಂಕರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಹಣ ಸಂಪಾದನೆಗಾಗಿ ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.