ಬೆಂಗಳೂರು: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು (ನಾಳೆ) ಚುನಾವಣೆ ನಡೆಯಲಿದೆ. ಕಣದಲ್ಲಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವ ಶಶಿ ತರೂರ್ ಇದ್ದಾರೆ. ಖರ್ಗೆಯವರ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಒಟ್ಟು 9100 ಮಂದಿ ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ರಾಜ್ಯದಲ್ಲಿ ಸಹ 494 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, 479 ಪಿಸಿಸಿ ಪ್ರತಿನಿಧಿಗಳು, 15 ಶಾಸಕಾಂಗ ಪಕ್ಷದ ಸದಸ್ಯರು ಮತದಾನ ಮಾಡಲಿದ್ದಾರೆ.
ಮತದಾನಕ್ಕೆ ಸಿದ್ಧತೆ:ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮತದಾನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ರಾಜ್ಯಕ್ಕೆ ಕೆಪಿಸಿಸಿ ಕಚೇರಿ ಮಾತ್ರವೇ ಏಕೈಕ ಮತಘಟ್ಟೆಯಾಗಿರಲಿದೆ. ಇಲ್ಲಿಯೇ ಆಗಮಿಸಿ ಸಿಎಲ್ಪಿ ಸದಸ್ಯರು ಹಾಗೂ ಪಿಸಿಸಿ ಪ್ರತಿನಿಧಿಗಳು ಆಗಮಿಸಿ ಮತ ಚಲಾಯಿಸಬೇಕಿದೆ. ರಾಜ್ಯದೆಲ್ಲೆಡೆಯಿಂದ ಮತದಾರರು ನಾಳೆ ಆಗಮಿಸಿ ಮತ ಚಲಾವಣೆ ಮಾಡಲಿದ್ದಾರೆ.
ವಿಶೇಷ ಮತಗಟ್ಟೆ:ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಸಂದರ್ಭದಲ್ಲೇ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಮತದಾನ ಹಿನ್ನೆಲೆ ಯಾತ್ರೆ ಮೊಟಕುಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಪಕ್ಷದ ವರಿಷ್ಠರು ರಾಹುಲ್ ಗಾಂಧಿ ಹಾಗೂ ಅವರೊಂದಿಗೆ ಯಾತ್ರೆಯಲ್ಲಿ ಭಾಗಿಯಾಗಿರುವ ಒಟ್ಟು 40 ಸದಸ್ಯರಿಗಾಗಿ ಪ್ರತ್ಯೇಕ ಹಾಗೂ ವಿಶೇಷ ಮತಗಟ್ಟೆ ಸ್ಥಾಪಿಸಿದೆ. 17ರಂದು ನಡೆಯುವ ಎಐಸಿಸಿ ಚುನಾವಣೆಯಲ್ಲಿ ರಾಹುಲ್ ಗಾಂಧಿ ಹಾಗೂ ಅವರ ಜತೆಗಿರುವ ರಾಷ್ಟ್ರೀಯ ನಾಯಕರು ಬಳ್ಳಾರಿಯ ಸಂಗನಕಲ್ಲು ಕ್ಯಾಂಪ್ ನಲ್ಲಿ ಮತ ಚಲಾವಣೆ ಮಾಡಲಿದ್ದಾರೆ.
ಸದ್ಯ ರಾಜ್ಯದ ಸಾಕಷ್ಟು ನಾಯಕರು ರಾಹುಲ್ ಗಾಂಧಿ ಜತೆ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಅವರಿಗೆ ಈ ಕ್ಯಾಂಪ್ನಲ್ಲಿ ಮತ ಚಲಾಯಿಸುವ ಅವಕಾಶ ಇಲ್ಲ. ಹೀಗಾಗಿ ಎಲ್ಲರೂ ಇಂದೇ ಮಹಾನಗರಕ್ಕೆ ವಾಪಸಾಗುತ್ತಿದ್ದು, ನಾಳಿನ ಮತದಾನದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದಿಂದ ಮತ ಚಲಾಯಿಸುವ ಸದಸ್ಯರು ಕೆಪಿಸಿಸಿ ಕಚೇರಿಯಲ್ಲಿಯೇ ತಮ್ಮ ಹಕ್ಕು ಚಲಾಯಿಸಬೇಕಿದೆ.