ದೊಡ್ಡಬಳ್ಳಾಪುರ:ಬಿಯರ್‌ನಲ್ಲಿ ಸೆಡಿಮಂಟ್ ಅಂಶ ಶೇಖರಣೆಯಾಗಿರುವ ಹಿನ್ನೆಲೆ ಸುಮಾರು 33ಲಕ್ಷ ರೂ. ಮೌಲ್ಯದ ಬಿಯರ್ ಬ್ರಾಂಡ್ ಬಾಟಲಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ನಾಶಪಡಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿರುವ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ನಲ್ಲಿ ಜುಲೈ 15 ರಂದು 7 ಇ ಮತ್ತು 7ಸಿ ಬ್ಯಾಚ್ನಲ್ಲಿ ತಯಾರಾದ ಪ್ರತಿಷ್ಠಿತ ಬ್ರಾಂಡ್ನ ಸ್ಟ್ರಾಂಗ್ ಮತ್ತು ಅಲ್ಟ್ರಾ ಲ್ಯಾಗರ್ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿತ್ತು. ಮಾನವ ಆರೋಗಕ್ಕೆ ಸೆಡಿಮೆಂಟ್ ಅಂಶ ಹಾನಿ ಮಾಡುವ ಹಿನ್ನೆಲೆ ಬಿಯರ್ ನಾಶ ಮಾಡುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಆದೇಶ ನೀಡಿದ್ದರು.
ಅಬಕಾರಿ ಇಲಾಖೆಯ ಉಪ ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ 1,272 ಪೆಟ್ಟಿಗೆಗಳನ್ನು ಮತ್ತು ದೊಡ್ಡಬಳ್ಳಾಪುರ ವಲಯದ 06 ಸನ್ನದುಗಳಿಗೆ ಕೆ.ಎಸ್.ಬಿ.ಸಿ.ಎಲ್. ಮದ್ಯ ಮಳಿಗೆ ಬಾಶೆಟ್ಟಿಹಳ್ಳಿಯಿಂದ ಸರಬರಾಜಾದ 149 ಬಾಟಲಿಗಳನ್ನು ಸನ್ನದುಗಳಿಂದ ವಾಪಸ್ ಪಡೆದು ಒಟ್ಟು 33 ಲಕ್ಷ ಮೌಲ್ಯದ ದಾಸ್ತಾನನ್ನು ನಾಶಪಡಿಸಲಾಗಿದೆ.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಉಪ ಆಯುಕ್ತ ನೇತೃತ್ವದಲ್ಲಿ ಅಬಕಾರಿ ಅಧೀಕ್ಷಕರು ಲಕ್ಷ್ಮೀನಾರಾಯಣ್, ನೆಲಮಂಗಲ ಉಪವಲಯ ಅಬಕಾರಿ ನಿರೀಕ್ಷಕ ಪರಮೇಶ್ವರಪ್ಪ, ದೊಡ್ಡಬಳ್ಳಾಪುರ ವಲಯ ಅಬಕಾರಿ ನಿರೀಕ್ಷಕಿ ಎಸ್.ಎಂ.ಪಾಟೀಲ್ ಮತ್ತಿತರರಿದ್ದರು.
ಮೈಸೂರಿನಲ್ಲಿ 25 ಕೋಟಿ ಮೌಲ್ಯದ ಮದ್ಯ ವಶ:ಆಗಸ್ಟ್ ತಿಂಗಳಿನಲ್ಲಿ ಬಿಯರ್ ಬ್ರ್ಯಾಂಡ್ವೊಂದರಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿತ್ತು. ಈ ಸಲುವಾಗಿ ಪ್ರಕರಣ ದಾಖಲಿಸಿಕೊಂಡ ಮೈಸೂರು ಅಬಕಾರಿ ಪೊಲೀಸರು 25 ಕೋಟಿ ಮೌಲ್ಯದ 78,678 ಬಾಕ್ಸ್ ಮದ್ಯವನ್ನು ವಶಪಡಿಸಿಕೊಂಡಿದ್ದರು. ಮೈಸೂರಿನ ನಂಜನಗೂಡಿನಲ್ಲಿರುವ ಕಂಪನಿಯಲ್ಲಿ ತಯಾರಿಸಿದ್ದ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿತ್ತು. ಕಂಪನಿಯ ಸ್ಟ್ರಾಂಗ್ ಹಾಗೂ ಅಲ್ಟ್ರಾ ಲ್ಯಾಗರ್ ಈ ಅಂಶ ಗೋಚರಿಸಿದ್ದು, 7e ಮತ್ತು 7c ನಮೂನೆಯ (ದಿನಾಂಕ 15-07-23ರಂದು) ಬಾಟಲಿಂಗ್‌ನಲ್ಲಿರುವುದು ತಿಳಿದು ಬಂದಿತ್ತು. ಮಾಹಿತಿ ತಿಳಿದ ಕೂಡಲೇ ಬಿಯರ್ ಮಾದರಿಯನ್ನು ಕೆಮಿಕಲ್ ಲ್ಯಾಬ್ಗೆ ಕಳುಹಿಸಲಾಗಿತ್ತು.
ಈ ಕುರಿತು (2-08-2023ರಂದು) ಕೆಮಿಕಲ್ ವರದಿ ಬಂದು 'ಅನ್‌ಫಿಟ್ ಫಾರ್ ಹ್ಯುಮನ್ ಕನ್ಸಂಪ್ಷನ್' ಎಂದು ತಿಳಿಸಲಾಗಿತ್ತು. ಆದರೆ ಇದೇ ಅವಧಿಯಲ್ಲಿ ಒಟ್ಟು 78,678 ಬಾಕ್ಸ್ ಬಿಯರ್ ಬಾಕ್ಸ್ ಸರಬರಾಜಾಗಿತ್ತು. ಅಷ್ಟೊತ್ತಿಗೆ ಎಲ್ಲ ಬಾಕ್ಸ್ಗಳನ್ನೂ ತಡೆಹಿಡಿಯಲಾಗಿತ್ತು. ಕೆಲವು ಡಿಪೋದಿಂದ ಅಂಗಡಿಗಳಿಗೂ ವಿತರಣೆಯಾಗಿತ್ತು. ರಿಟೈಲ್‌ನಲ್ಲೂ ಮಾರಾಟವಾಗದಂತೆ ತಡೆಹಿಡಿಯಲಾಗಿತ್ತು. ಗುಣಮಟ್ಟದ ಬಿಯರ್ ತಯಾರಿಸದ ಕಂಪನಿಯ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ:Ganesh Fest: ಬೆಂಗಳೂರಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತು ಬಿಬಿಎಂಪಿ ಆಯುಕ್ತರಿಂದ ಸಭೆ