ಕರ್ನಾಟಕ

karnataka

ETV Bharat / state

ಆರೋಗ್ಯ ಸೇವೆಗೆ 262 ಆಂಬ್ಯುಲೆನ್ಸ್​ ಸೇರ್ಪಡೆ , 46 ಹೊಸ ಡಯಾಲಿಸಿಸ್ ಕೇಂದ್ರ ಆರಂಭ: ದಿನೇಶ್ ಗುಂಡೂರಾವ್

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಅನಾರೋಗ್ಯ ಪೀಡಿತ ಜನರ ಹಠಾತ್ ಹೃದಯಾಘಾತ ತಡೆಗೆ STEMI - ST Elevated Myocardial Infraction ಕಾರ್ಯಕ್ರಮ ರೂಪಿಸಲಾಗಿದೆ. 31 ಜಿಲ್ಲೆಗಳಲ್ಲಿ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ HUB and Spoke ಮಾದರಿಯ ತುರ್ತು ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

Minister Dinesh Gundu Rao spoke at the press conference.
ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By ETV Bharat Karnataka Team

Published : Nov 29, 2023, 9:41 PM IST

Updated : Nov 29, 2023, 10:15 PM IST

ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಪೂರೈಸಿದೆ. ಆರೋಗ್ಯ ಇಲಾಖೆ ಜವಾಬ್ದಾರಿ ತೆಗೆದುಕೊಂಡ ಬಳಿಕ ಈ ಆರು ತಿಂಗಳ ಅವಧಿಯಲ್ಲಿ ಜನಸಾಮಾನ್ಯರಿಗೆ ತುರ್ತಾಗಿ ಆಗಬೇಕಾದ ಆರೋಗ್ಯ ಸೇವೆಗಳನ್ನು ಸುಧಾರಣೆಯತ್ತ ತರುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಿದ್ದೇನೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ ನಡೆದ ಸದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆಂಬ್ಯುಲೆನ್ಸ್​​ ಮತ್ತು ಡಯಾಲಿಸಿಸ್. ಈ ಎರಡು ಆರೋಗ್ಯ ಸೇವೆಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ನಾನು ಹಳೆಯದನ್ನು ಕೆದಕಲು ಹೋಗುವುದಿಲ್ಲ. ಸಕಾರಾತ್ಮಕ ಚಿಂತನೆಯೊಂದಿಗೆ ಇರುವ ಸಮಸ್ಯೆಗಳನ್ನು ಸರಿಪಡಿಸುವ ಕಡೆ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.

ಆಂಬ್ಯುಲೆನ್ಸ್ ಸೇವೆ ಬಲಪಡಿಸಲು ಆದ್ಯತೆ: ಜನರ ಆರೋಗ್ಯ ಸೇವೆಗಾಗಿ 262 ಹೊಸ ಆಂಬ್ಯುಲೆನ್ಸ್​ಗಳು ಸೇರ್ಪಡೆಯಾಗುತ್ತಿವೆ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನೂತನ ಆಂಬ್ಯುಲೆನ್ಸ್​​ಗಳಿಗೆ ಚಾಲನೆ ಸಿಗಲಿದೆ. ಒಟ್ಟು 82,02,88,120 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ. ​157 BLS - ಬೇಸಿಕ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್‌ಗಳು, 105 ALS - ಸುಧಾರಿತ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ ಗಳು, ​ALS ಆಂಬ್ಯುಲೆನ್ಸ್ ಗಳು, ಟ್ರಾನ್ಸ್‌ಪೋರ್ಟ್ ವೆಂಟಿಲೇಟರ್ ಮತ್ತು ಡಿಫಿಬ್ರಿಲೇಟರ್ ಹೊಂದಿವೆ ಎಂದು ಮಾಹಿತಿ ನೀಡಿದರು.

ಹೃದಯ ಮತ್ತು ಉಸಿರಾಟದ ಅಗತ್ಯದ ತುರ್ತು ಪರಿಸ್ಥಿತಿಗಳಲ್ಲಿ ಇವು ಸಹಕಾರಿಯಾಗಲಿವೆ‌. ​ಪ್ರತಿ ಆಂಬ್ಯುಲೆನ್ಸ್‌ನಲ್ಲಿ ತುರ್ತು ಸೇವೆಗಳನ್ನು ನಿರ್ವಹಿಸಲು ತರಬೇತಿ ಪಡೆದ ಒಬ್ಬ ತುರ್ತು ವೈದ್ಯಕೀಯ ತಂತ್ರಜ್ಞ (EMT – ಶುಶ್ರೂಷಾ ಸಿಬ್ಬಂದಿ) ಮತ್ತು ಒಬ್ಬ ಪೈಲಟ್ (ಚಾಲಕ) ದಿನಕ್ಕೆ ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. 262 ಆಂಬ್ಯುಲೆನ್ಸ್ ಗಳ ಸೇರ್ಪಡೆಯೊಂದಿಗೆ ಒಟ್ಟು 715 ಆಂಬ್ಯುಲೆನ್ಸ್‌ಗಳು 108 ಆರೋಗ್ಯ ಕವಚ ಸೇವೆಯಲ್ಲಿ ಕಾರ್ಯನಿರ್ವಹಿಸಲಿವೆ. ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ಅನುಗುಣ ಆಂಬ್ಯುಲೆನ್ಸ್‌ಗಳನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಏಕ ಬಳಕೆ ಡಯಾಲಿಸಿಸ್ ಯಂತ್ರಗಳ ಅಳವಡಿಕೆ : ರಾಜ್ಯದಲ್ಲಿ 173 ಡಯಾಲಿಸಿಸ್ ಕೇಂದ್ರಗಳನ್ನು 219 ಕ್ಕೆ ಏರಿಕೆ ಮಾಡಲಾಗಿದೆ. 46 ತಾಲೂಕುಗಳಲ್ಲಿ ಹೊಸ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ ಆಗಿದೆ. ರಾಜ್ಯಾದ್ಯಂತ ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳ ಅಳವಡಿಗೆ ಕ್ರಮ ವಹಿಸಲಾಗಿದೆ. 800 ಸಿಂಗಲ್ used ಡಯಾಲಿಸಿಸ್ ಯಂತ್ರಗಳನ್ನ ಅಳವಡಿಸಲಾಗುತ್ತಿದೆ.

ಬೆಂಗಳೂರು ಡಿವಿಸನ್ - 250, ಮೈಸೂರು ಡಿವಿಸನ್ - 225, ಬೆಳಗಾವಿ ಡಿವಿಸನ್ - 201, ಕಲಬುರಗಿ ಡಿವಿಸನ್ - 125, ಪಿಪಿಪಿ‌ ಮಾಡೆಲ್ ನಲ್ಲಿ ಈ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಒಂದು ಡಯಾಲಿಸಿಸ್ ಸರ್ವೀಸ್​ ಗೆ ಡಿಸೆಂಬರ್ ಅಂತ್ಯ ಅಥವಾ ಜನವರಿ ತಿಂಗಳಲ್ಲಿ ಏಕ ಬಳಕೆಯ ಡಯಾಸಿಸ್ ಯಂತ್ರಗಳ ಸೇವೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಸಿ ಟಿ ಸ್ಕ್ಯಾನ್, ಎಂ ಆರ್‌ ಐ ಸೇವೆಗಳು : ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಿ ಟಿ ಸ್ಯ್ಕಾನ್ ಮತ್ತು ಎಂ ಆರ್ ಐ ಸ್ಕ್ಯಾನಿಂಗ್ ಆರೋಗ್ಯ ಸೇವೆ ವಿಸ್ತರಣೆ ಮಾಡಲಾಗಿದೆ. ಹೊಸದಾಗಿ 5 ಸಿ ಟಿ ಮತ್ತು 15 ಎಂ ಆರ್‌ ಐ ಸ್ಕ್ಯಾನಿಂಗ್‌ ಯಂತ್ರಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. 6 ತಿಂಗಳಲ್ಲಿ ಒಟ್ಟು 158969 ಸಿ.ಟಿ ಸ್ಕ್ಯಾನ್‌ ಹಾಗೂ 53659 ಎಂ ಆರ್‌ ಐ ಸ್ಕ್ಯಾನ್‌ ಸೇವೆಗಳನ್ನು 6 ತಿಂಗಳ ಅವಧಿಯಲ್ಲಿ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ : ಹಠಾತ್ ಹೃದಯಾಘಾತ ತಡೆಯಲು STEMI - ST Elevated Myocardial Infraction ಕಾರ್ಯಕ್ರಮ ರೂಪಿಸಲಾಗಿದೆ. 31 ಜಿಲ್ಲೆಗಳಲ್ಲಿ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ HUB and Spoke ಮಾದರಿಯ ತುರ್ತು ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಎದೆನೋವು ಕಾಣಿಸಿಕೊಂಡವರಿಗೆ ತಾಲೂಕು ಮಟ್ಟದ ಆಸ್ಪತ್ರೆಯಲ್ಲೇ AI ತಂತ್ರಜ್ಞಾನದ ಮೂಲಕ ತಪಾಸಣೆ.

ಹಠಾತ್ ಹೃದಘಾತದ ಮೂನ್ಸೂಚನೆ ಇರುವವರಿಗೆ ತಾಲೂಕು ಆಸ್ಪತ್ರೆಗಳ Spoke ಕೇಂದ್ರಗಳಲ್ಲೇ ಉಚಿತ Tenecteplase ಇಂಜೆಕ್ಷನ್ ನೀಡಲಾಗುತ್ತದೆ. 35 ರಿಂದ 45 ಸಾವಿರ ಬೆಲೆಯ Tenecteplase ಇಂಜೆಕ್ಷನ್ ಉಚಿತವಾಗಿದೆ. ಜಯದೇವ ಹೃದ್ರೋಗ ಸಂಸ್ಥೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ 10 ಹುಬ್ ಸೆಂಟರ್ ಗಳಲ್ಲಿ ಉನ್ನತ ಮಟ್ಟದ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.

ಜಯದೇವ ಸಹಯೋಗದೊಂದಿಗೆ ಈಗಾಗಲೇ 45 Spoke ಸೆಂಟರ್ ರೂಪಿಸಲಾಗಿದ್ದು, 7 ಹಬ್ ಹಾಗೂ 40 spoke ಸೆಂಟರ್ ನಿರ್ಮಾಣ ಪ್ರಗತಿಯಲ್ಲಿದೆ. Defibrillator ಖರೀದಿಗೆ ತಾಂತ್ರಿಕ ಸಮಿತಿಯಲ್ಲಿ ಅನುಮೋದನೆ ಪಡೆಯಲಾಗಿದೆ. ಎನ್.ಸಿ.ಡಿ ರೋಗಗಳ ತಪಾಸಣೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ 2 ನೇ ಸ್ಥಾನಗಳಿಸಿದೆ. (CPHC – NCD APP) 6 ತಿಂಗಳಲ್ಲಿ ಒಟ್ಟು 12,29,712 ತಪಾಸಣೆ ಮಾಡಲಾಗಿದೆ ಎಂದು ತಿಳಿಸಿದರು.

2025 ರೊಳಗೆ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಗುರಿ : ಕರ್ನಾಟಕದಲ್ಲಿ ಅನಿಮೀಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಗೆ 185.74 ಕೋಟಿ ಅನುದಾನವನ್ನು ಅನುಮೋದಿಸಲಾಗಿದೆ. ಯೋಜನೆಯಡಿ ಶಾಲಾ ಕಾಲೇಜು ಮಕ್ಕಳ ರಕ್ತ ಹೀನತೆ ತಪಾಸಣೆ ಹಾಗೂ ಉಚಿತ ಔಷಧ ಒದಗಿಸಲಾಗುವುದು.‌ ಶುಚಿ ಯೋಜನೆಯಡಿ ನ್ಯಾಪ್ಕಿನ್ ವಿತರಣಾ ಯೋಜನೆಗೆ ಮರು ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.

ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಒದಗಿಸಲು ಕ್ರಮ ವಹಿಸಲಾಗಿದ್ದು, 40.50 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಯಾಗಲಿದೆ. ಸರ್ಕಾರಿ ಮತ್ತು ಅನುದಾನಿತ ಶಾಲಾ ಹೆಣ್ಣು ಮಕ್ಕಳಿಗೆ ವಿತರಣೆ ಮಾಡಲಿದ್ದು, ದಕ್ಷಿಣ ಕನ್ನಡ, ಚಾಮರಾಜ ನಗರ ಜಿಲ್ಲೆಗಳಲ್ಲಿ 'ನನ್ನ ಮೈತ್ರಿ ಕಪ್ 'ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಿದ್ದು, 15 ಸಾವಿರ ಹೆಣ್ಣು ಮಕ್ಕಳಿಗೆ ಮೆನ್ಶುಯಲ್ ಕಪ್ ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ಕರ್ನಾಟಕ: ಆರೋಗ್ಯ ಕ್ಷೇತ್ರ ವೃತ್ತಿಪರರ ನೋಂದಣಿಯಲ್ಲಿ (HPR)ಕರ್ನಾಟಕವು ಭಾರತದಲ್ಲಿ ಎರಡನೇ ಸ್ಥಾನದಲ್ಲಿದ್ದು, ಇದುವರೆಗೂ 40,643ಕ್ಕೂ ಹೆಚ್ಚು ನೋಂದಣಿಯನ್ನು ಪರಿಶೀಲಿಸಲಾಗಿದೆ. ಜಿಲ್ಲಾ ಆಸ್ಪತ್ರೆ, ಮೈಸೂರು ಜಿಲ್ಲೆಯು QR code ಬಳಸಿ ಹೆಚ್ಚಿನ ಸಂಖ್ಯೆಯಲ್ಲಿ OPD ನೋಂದಣಿ ಮಾಡಿರುವುದಕ್ಕೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ, ಭಾರತ ಸರ್ಕಾರದಿಂದ ಪ್ರಶಸ್ತಿ ಪಡೆದು ಗುರುತಿಸಲ್ಪಟ್ಟಿದೆ.

ರಾಜ್ಯವು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ದಾಖಲೆಗಳನ್ನು ABHA ನಲ್ಲಿ ಲಿಂಕ್ ಮಾಡಿರುವುದರಲ್ಲಿ ಮತ್ತು Scan and share ಟೋಕನ್ ಸೃಜನೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ, ಭಾರತ ಸರ್ಕಾರದಿಂದ ಪ್ರಶಸ್ತಿಯನ್ನು ಪಡೆಯಲಾಗಿರುತ್ತದೆ.

ಜಿಲ್ಲಾ ಆಸ್ಪತ್ರೆ, ಧಾರವಾಡ ಜಿಲ್ಲೆಯು ವೈದ್ಯಕೀಯ ದಾಖಲೆಗಳನ್ನು ABHA ನಲ್ಲಿ ಲಿಂಕ್ ಮಾಡಿರುವುದರಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದೆ. ರಾಷ್ಠ್ರೀಯ ಕುಟುಂಬ ಯೋಜನೆಯಡಿಯಲ್ಲಿ ಎರಡು ನೂತನ ಗರ್ಭನಿರೋಧಕಗಳಾದ ಸಬ್‌ ಡರ್ಮಲ್‌ ಸಿಂಗಲ್‌ ರಾಡ್‌ ಇಂಪ್ಲಾಂಟ್ (ಬೆಂಗಳೂರು ಮತ್ತು ಬೀದರ್) ಮತ್ತು ಸಬ್‌ ಕ್ಯೂಟೇನಿಯಸ್‌ ಇಂಜೆಕ್ಷನ್‌ ಅಂತರಾ‌ (ಯಾದಗಿರಿ ಮತ್ತು ಮೈಸೂರು) ಜಿಲ್ಲೆಗಳಲ್ಲಿ ಪ್ರಾಯೋಗಿಕ ಅನುಷ್ಠಾನ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಆಯುಷ್ಮಾನ್‌ ಭಾರತ್‌ - ಆರೋಗ್ಯ ಕರ್ನಾಟಕ: ಯೋಜನೆಯಡಿ 16,79,433 ಪ್ರಕರಣಗಳ ಚಿಕಿತ್ಸೆಗೆ ಒಟ್ಟು ರೂ.1079.29 ಕೋಟಿಗಳ ಅನುಮೋದನೆ ನೀಡಲಾಗಿರುತ್ತದೆ. ಆಯುಷ್ಮಾನ್ ಭಾರತ್- ಪ್ರಧಾನ ಜನಾರೋಗ್ಯ ಯೋಜನೆ - ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಈ ವರೆಗೆ 1.55 ಕೋಟಿ ಕಾರ್ಡ್‌ ಗಳು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಜಾಲತಾಣದಲ್ಲಿ ನೋಂದಣಿ ಆಗಿವೆ. ಇದನ್ನು ಸಮರ್ಪಕವಾಗಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಇದನ್ನೂಓದಿ:ಚೈನಾ ನ್ಯುಮೋನಿಯಾ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ: ಸಚಿವ ದಿನೇಶ್ ಗುಂಡೂರಾವ್

Last Updated : Nov 29, 2023, 10:15 PM IST

ABOUT THE AUTHOR

...view details