ಕರ್ನಾಟಕ

karnataka

ETV Bharat / state

ಬುಧವಾರ ಒಂದೇ ದಿನ ದಾಖಲೆಯ 26 ಸಾವಿರ ಆಸ್ತಿ ನೋಂದಣಿ.. 312 ಕೋಟಿ ರೂ. ಆದಾಯ ಸಂಗ್ರಹ - Office of the Deputy Registrar

ಬುಧವಾರ ಒಂದೇ ದಿನ 26,058 ಆಸ್ತಿ ನೋಂದಣಿ ಪ್ರಕ್ರಿಯೆ ನಡೆದಿದ್ದು, 312 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

24500-property-registrations-on-a-single-day
ಬುಧವಾರ ಒಂದೇ ದಿನ 26 ಸಾವಿರ ಆಸ್ತಿ ನೋಂದಣಿ.. 312 ಕೋಟಿ ರೂ. ಆದಾಯ ಸಂಗ್ರಹ

By ETV Bharat Karnataka Team

Published : Sep 27, 2023, 9:04 PM IST

Updated : Sep 27, 2023, 10:56 PM IST

ಬೆಂಗಳೂರು : ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ 26 ಸಾವಿರ ಆಸ್ತಿಗಳ ನೋಂದಣಿ ಮಾಡಿ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಇಲ್ಲಿಯವರೆಗೆ ಒಂದು ದಿನದಲ್ಲಿ 10ರಿಂದ 12 ಸಾವಿರ ಆಸ್ತಿಗಳ ನೋಂದಣಿ ಮಾಡಲಾಗುತ್ತಿತ್ತು. ರಿಜಿಸ್ಟರೇಷನ್​ಗೆ ಕಾವೇರಿ - 2 ತಂತ್ರಾಂಶ ಬಳಕೆ ಆರಂಭವಾದ ಮೇಲೆ ನೋಂದಣಿಯು ತ್ವರಿತಗತಿಯಲ್ಲಿ ಆಗುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಒಂದೇ ದಿನದಲ್ಲಿ ಮಾಡಲಾದ 26,058 ಆಸ್ತಿಗಳ ನೋಂದಣಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 312 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆ ಇತಿಹಾಸದಲ್ಲೇ ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಸ್ತಿ ನೋಂದಣಿ- ದಸ್ತಾವೇಜು ಪ್ರಕ್ರಿಯೆ ನಡೆದಿರುವುದು ಹಾಗೂ ಗರಿಷ್ಠ ಶುಲ್ಕ ಸಂಗ್ರಹ ಆಗಿರುವುದು ಹೊಸ ದಾಖಲೆಯಾಗಿದೆ.

ಕಳೆದ ಸೋಮವಾರವಷ್ಟೇ 15936 ನೋಂದಣಿ ದಸ್ತಾವೇಜು ಪ್ರಕ್ರಿಯೆ ನಡೆದಿದ್ದು, 158.28 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಇದೀಗ ಎರಡೇ ದಿನದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುತ್ತಲೇ ಇದ್ದು, ಕಂದಾಯ-ನೋಂದಣಿ ಇಲಾಖೆ ಮತ್ತೊಂದು ಮೈಲಿಗಲ್ಲು ಮುಟ್ಟಿದಂತಾಗಿದೆ. ಕಳೆದ ಸೆಪ್ಟೆಂಬರ್ 22 ರಂದು 12,955 ಆಸ್ತಿ ನೋಂದಣಿ, ದಸ್ತಾವೇಜು ಪ್ರಕ್ರಿಯೆ ಮೂಲಕ 130.87 ಕೋಟಿ ರೂ. ಹಾಗೂ ಸೆ. 25ರಂದು 158.28 ಕೋಟಿ ರೂ. ಹಣ ಸರ್ಕಾರದ ಬೊಕ್ಕಸಕ್ಕೆ ಬಂದಿತ್ತು.

ಕಾವೇರಿ-2 ತಂತ್ರಾಂಶದ ಫಲಿತಾಂಶ :ನೋಂದಣಿ ಸೇರಿದಂತೆ ಇತರೆ ಪ್ರಕ್ರಿಯೆಗಳಿಗೆ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಲ್ಲದೆ ಆಸ್ತಿದಾರರೇ ಬಯಸಿದ ದಿನ ಮತ್ತು ಸಮಯಕ್ಕೆ ಆಸ್ತಿ ನೋಂದಣಿ ಮಾಡಿಕೊಳ್ಳುವ, ಆನ್​​ಲೈನ್​ನಲ್ಲೇ ಶುಲ್ಕ ಪಾವತಿ ವ್ಯವಸ್ಥೆಯಿರುವ 'ಕಾವೇರಿ- 2' ತಂತ್ರಾಂಶವನ್ನು ಈಗಾಗಲೇ ಅಳವಡಿಕೆಯಾಗಿದೆ. ಇದೇ ಕಾರಣಕ್ಕೆ ಆಸ್ತಿ ನೋಂದಣಿ ಸಂಖ್ಯೆಯೂ ಹೆಚ್ಚುತ್ತಿದೆ.

ರಾಜ್ಯದ 256 ಉಪನೋಂದಣಿ ಕಚೇರಿಗಳಲ್ಲಿ ಜೂ. 25ರಿಂದ ಪೂರ್ಣ ಪ್ರಮಾಣದಲ್ಲಿ ಸುಧಾರಿತ ತಂತ್ರಾಂಶದಡಿಯೇ ನೋಂದಣಿ, ದಸ್ತಾವೇಜು ಕಾರ್ಯ ನಡೆದಿವೆ. ಒಂದೇ ದಿನದಲ್ಲಿ ಗರಿಷ್ಠ ನೋಂದಣಿ, ದಸ್ತಾವೇಜು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ತಂತ್ರಾಂಶವು ತನ್ನ ಗರಿಷ್ಠ ಕಾರ್ಯಕ್ಷಮತೆಯನ್ನು ಸಾಬೀತುಪಡಿಸುತ್ತಿದೆ.

ಕಾವೇರಿ-2 ತಂತ್ರಾಂಶಕ್ಕೆ ಆರಂಭದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರಲ್ಲಿರುವ ಸಮಸ್ಯೆಗಳ ಕುರಿತು ಸಾಕಷ್ಟು ದೂರುಗಳೂ ಇಲಾಖೆಗೆ ಬಂದಿದ್ದವು. ಇದೀಗ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸಿದ್ದು, ಕಾವೇರಿ-2 ತಂತ್ರಾಂಶ ಸಾಕಷ್ಟು ಜನ ಮನ್ನಣೆ ಗಳಿಸಿದೆ. ಇದರ ಸಹಾಯದಿಂದ ಮಧ್ಯವರ್ತಿಗಳ ಹಾವಳಿ ಇಲ್ಲದೇ ಶೀಘ್ರ ಮತ್ತು ಪಾರದರ್ಶಕವಾಗಿ ನೋಂದಣಿ ಪ್ರಕ್ರಿಯೆಗಳು ಮುಗಿಯುತ್ತಿವೆ. ಈ ಮೂಲಕ ಸರ್ಕಾರಕ್ಕೂ ಆದಾಯ ಹೆಚ್ಚುತ್ತಿದ್ದು, ಜನರಿಗೂ ಸರಳ ಸುಲಭ ಸೇವೆಯ ಜೊತೆಗೆ ಸಮಯವೂ ಉಳಿಯುತ್ತಿದೆ.

ಇದನ್ನೂ ಓದಿ:ಭೂ ಖರೀದಿದಾರರಿಗೆ ಸದ್ಯದಲ್ಲೇ ಶಾಕ್: ಆಸ್ತಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ಚಿಂತನೆ.. ಸಚಿವ ಕೃಷ್ಣ ಭೈರೇಗೌಡ

Last Updated : Sep 27, 2023, 10:56 PM IST

ABOUT THE AUTHOR

...view details