ಬೆಂಗಳೂರು:ನಗರದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುವ ಕ್ರಮಗಳ ಕುರಿತು ಇಂದು ಸಚಿವ ವಿ.ಸೋಮಣ್ಣ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪಾಲಿಕೆ ಅಧಿಕಾರಿಗಳು ಹಾಗೂ ನಗರದ ಪೂರ್ವ ವಲಯದ ವಿಧಾನಸಭಾ ಕ್ಷೇತ್ರಗಳ ಶಾಸಕರು ಬಿಬಿಎಂಪಿ ಅಧಿಕಾರಿಗಳ ಜೊತೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಚೆನ್ನೈ ಮಾದರಿಯಲ್ಲಿ ನಗರದಲ್ಲಿ 20 ವಾಹನಗಳಲ್ಲಿ, ಮೊಬೈಲ್ ಆಕ್ಸಿಜನ್ ಪೂರೈಕೆ ಮಾಡುವ ಬಗ್ಗೆ ಮಾತುಕತೆ ನಡೆದಿದೆ. ಆಕ್ಸಿಜನ್ ಜನರೇಟರ್ ಇಟ್ಟುಕೊಂಡು ಆಸ್ಪತ್ರೆಗಳ ಹೊರಗೆ ಕಾಯುವ ರೋಗಿಗಳಿಗೆ ಆಕ್ಸಿಜನ್ ಕೊಡಲಾಗುವುದು ಎಂದರು.
ಸಭೆಯ ಆರಂಭದಲ್ಲಿ ಹೆಬ್ಬಾಳ ಶಾಸಕ ಬೈರತಿ ಸುರೇಶ್, ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಸಚಿವರ ಬಳಿ ಬೆಡ್ ಬುಕ್ಕಿಂಗ್ ದಂಧೆಯಲ್ಲಿ ಒಂದೇ ಕೋಮಿನವರ ಹೆಸರನ್ನು ಓದಿ ಹೇಳಿ ಆರೋಪ ಹೊರಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, 4 ಸಾವಿರ ಬೆಡ್ ದಂಧೆ ಆಗಿದೆ ಎಂದು ಹೆಳುತ್ತಿದ್ದಾರೆ. ಹಾಗಿದ್ರೆ ಆಡಳಿಗಾರರನ್ನ ಹೊಣೆ ಮಾಡಿ, ಸರ್ಕಾರವೇ ಸ್ಕ್ಯಾಮ್ ಮಾಡಿದೆ. ಕೇವಲ 17 ಜನರ ಮೇಲೆ ಆರೋಪ ಮಾಡಿದ್ದು ಯಾಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ವಲಯಗಳಲ್ಲಿ ಈಗ ಶಾಸಕರ ಫೋನ್ಗಳಿಗೆ ಕೇರ್ ಕೂಡಾ ಮಾಡುತ್ತಿಲ್ಲ. ಹೆಬ್ಬಾಳದಲ್ಲಿ 69 ಜನ ಬೆಡ್ಗಾಗಿ ಕಾಯುತ್ತಿದ್ದಾರೆ. ಇನ್ನು ಈ ಸಮಯದಲ್ಲಿ ಡಾಕ್ಟರ್ಗಳನ್ನು ಪೊಲೀಸ್ ಸ್ಟೇಷನ್ ಕರೆದುಕೊಂಡು ಹೋಗಿ ಕೂರಿಸಿದರೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಇನ್ನು ವಾರ್ ರೂಂ ಸಿಬ್ಬಂದಿಗಳ ಹೆಸರು ಓದಿದ್ದಕ್ಕೆ ಉಳಿದ ಸಿಬ್ಬಂದಿಗಳೂ ಕೆಲಸ ಮಾಡಲು ಹೆದರಿಕೊಳ್ಳುತ್ತಿದ್ದಾರೆ ಎಂದರು.
ಅಮಾಯಕರಿಗೆ ಶಿಕ್ಷೆ ಆಗಲ್ಲ - ಭಯಬೇಡ:
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಬೆಡ್ ಬ್ಲಾಕಿಂಗ್ ವಿಚಾರದಲ್ಲಿ ಅಮಾಯಕರಿಗೆ ಸಮಸ್ಯೆ ಆಗಲ್ಲ. ತಪ್ಪಿತಸ್ಥರಿಗೆ ಅಷ್ಟೇ ಶಿಕ್ಷೆಯಾಗಲಿದೆ ಎಂದು ತಿಳಿಸಿದರು.
ಕೆಲ ಆಸ್ಪತ್ರೆಗಳಲ್ಲಿ ರಕ್ಷಣೆ ಬೇಕು ಎಂದು ಕೇಳಿದ್ದಲ್ಲಿ, ಭದ್ರತೆ ನೀಡಲಾಗುವುದು. ಪ್ರತಿ ಆಸ್ಪತ್ರೆಯಲ್ಲಿ ನೋಡಲ್ ಅಧಿಕಾರಿ, ಆಪ್ತಮಿತ್ರ ಸಿಬ್ಬಂದಿಗಳಿದ್ದಾರೆ. ಐದಾರು ಆಸ್ಪತ್ರೆಗೆ ಒಬ್ಬರು ನೋಡಲ್ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿ ಇದ್ದಾರೆ. ಲಾಕ್ಡೌನ್ ಬಗ್ಗೆ ಬಹಳ ಸ್ಪಷ್ಟವಾದ ಮಾರ್ಗಸೂಚಿ ಇದೆ. ಜನ ಉಲ್ಲಂಘಿಸಿದರೆ ಪೊಲೀಸರಿಂದ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.