ಬೆಂಗಳೂರು: ಮಾದಕ ವಸ್ತು ಚರಸ್ ಮತ್ತು ಗಾಂಜಾ ಎಣ್ಣೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಂಪುರ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಮೂರು ಜನರು ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತು ಚರಸ್ ಇಟ್ಟುಕೊಂಡು ಶ್ರೀರಾಂಪುರ ದಯಾನಂದ ನಗರದಿಂದ ಸುಬ್ರಮಣ್ಯ ನಗರದ ಕಡೆಗೆ ಮಾರಾಟ ಮಾಡಲು ಹೋಗುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಖಾಕಿ ಪಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಶಾಂತ್ @ ಮೊಟ್ಟೆ, ಜಾನ್ @ ಕರಿಯಾ ಮತ್ತು ಸುಂದರ್ @ ಕುಟ್ಟಿ ಬಂಧಿತ ಆರೋಪಿಗಳು. ಸದ್ಯ ಈ ಮೂವರನ್ನು ಬಂಧಿಸಿ, ಆರೋಪಿಗಳಿಂದ 800 ಗ್ರಾಂ ಮಾದಕ ವಸ್ತು ಚರಸ್, 200 ಗ್ರಾಂ ಗಾಂಜಾ ಎಣ್ಣೆ, ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ, ಆರೋಪಿಗಳಿಗೆ 2 ತಿಂಗಳ ಹಿಂದೆ ನಾರಾಯಣ ಮತ್ತು ಹರೀಶ್ @ ಚೂರಿ ಎಂಬುವವರು ಮಾದಕ ವಸ್ತು ಚರಸ್ ಮತ್ತು ಗಾಂಜಾ ಎಣ್ಣೆಯನ್ನು ಮಾರಾಟ ಮಾಡಲು ಕೊಟ್ಟಿದ್ದನ್ನು ಬಾಯಿ ಬಿಟ್ಟಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಾರಾಯಣ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಕೊಲೆಯತ್ನ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಇದನ್ನೂ ಓದಿ:ಒಂದು ಕೊಲೆ.. ಮೂರು ತಂಡ.. ನಾಲ್ಕು ಆಯಾಮಗಳಲ್ಲಿ ತನಿಖೆ!
ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರು ಆರೋಪಿಗಳ ಹೆಚ್ವಿನ ವಿಚಾರಣೆ ನಡೆಸಿದಾಗ ದೊರೋಡೆ, ಗಾಂಜಾ ಮಾರಾಟ, ಕೊಲೆ ಯತ್ನ ಹೀಗೆ ಅನೇಕ ಪ್ರಕರಣಗಳಡಿ ನಗರದ ವಿವಿಧ ಠಾಣಾ ವ್ಯಪ್ತಿಯಲ್ಲಿ ದೂರು ದಾಖಲಾಗಿರುವುದು ಬೆಳಕಿಗೆ ಬಂದಿವೆ.. ಇನ್ನು ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಈತನಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ.