ಬೆಂಗಳೂರು: ಭಾನುವಾರ ರಜಾ ದಿನ. ಪ್ರವಾಸ, ಜಾಲಿಯಾಗಿ ಸುತ್ತಾಡಲು ಹೋಗುವುದೆಲ್ಲ ಸಾಮಾನ್ಯ. ಆದರೆ ನಿನ್ನೆ ರಾಜ್ಯದ ವಿವಿಧೆಡೆ ಕೆಲವು ಕಹಿ ಘಟನೆಗಳು ಸಂಭವಿಸಿವೆ. ಪ್ರತ್ಯೇಕ ಘಟನೆಗಳಲ್ಲಿ ಸುಮಾರು 17 ಜನರು ಪ್ರಾಣ ಸಾವಿಗೀಡಾಗಿದ್ದಾರೆ. ಘಟನೆಗಳ ವಿವರ ಇಲ್ಲಿದೆ.
ಅಪಘಾತದಲ್ಲಿ 6 ಜನ ಸಾವು: ಲಾರಿ ಮತ್ತು ಇಂಡಿಕಾ ಕಾರು ನಡುವೆ ಡಿಕ್ಕಿ ಸಂಭವಿಸಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ನಡೆಯಿತು. ಕಾರಿನ ಟೈಯರ್ ಸ್ಫೋಟಗೊಂಡು ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ರಾಜಪ್ಪ ಬನಗೋಡಿ (40), ರಾಘವೇಂದ್ರ ಕಾಂಬಳೆ (24), ಅಕ್ಷಯ ಶಿವಶರಣ (21), ಜಯಶ್ರೀ (26), ಮಕ್ಕಳಾದ ರಾಕಿ (4) ಹಾಗೂ ರಕ್ಷಿತಾ (2) ಮೃತರು.
ಮೃತರೆಲ್ಲರೂ ಕಾರಿನಲ್ಲಿ ವಿಜಯಪುರಿಂದ ಬೆಂಗಳೂರಿಗೆ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಕಾರಿನ ಟೈಯರ್ ಸ್ಫೋಟಗೊಂಡು ಇನ್ನೊಂದು ಬದಿಯ ರಸ್ತೆಗೆ ಬಂದು ಲಾರಿಗೆ ಕಾರು ಡಿಕ್ಕಿಯಾಗಿದೆ. ಲಾರಿ ವೇಗವಾಗಿ ಚಲಿಸುತ್ತಿದ್ದುದರಿಂದ ಕಾರು ಸಂಪೂರ್ಣ ವಾಹನದ ಕೆಳಗಡೆ ನುಸುಳಿದೆ. ಕಾರಿನಿಂದ ಮೃತದೇಹಗಳನ್ನು ಹೊರಗಡೆ ತೆಗೆಯಲು ಹರಸಾಹಸ ಪಡಬೇಕಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
ನಾಲ್ವರು ಸ್ನೇಹಿತರು ನೀರುಪಾಲು:ನಂದಿ ಬೆಟ್ಟ ಪ್ರವಾಸಕ್ಕೆ ಬಂದಿದ್ದ ನಾಲ್ವರು ಯುವಕರು ನೀರು ಪಾಲಾಗಿರುವ ಘಟನೆ ಬೆಂಗಳೂರಿನ ದೇಹನಹಳ್ಳಿ ಸಮೀಪದ ರಾಮನಾಥಪುರ ಕೆರೆಯಲ್ಲಿ ರವಿವಾರ ನಡೆದಿದೆ. ಬೈಕ್ನಲ್ಲಿ ಬಂದಿದ್ದ ಯುವಕರು ಬೆಂಗಳೂರಿಗೆ ವಾಪಸ್ ಮರಳುತ್ತಿರುವಾಗ ದಾರಿ ಮಧ್ಯೆ ಸಿಕ್ಕ ಕೆರೆಯಲ್ಲಿ ಈಜಲು ಹೋಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ನೀರಿನಲ್ಲಿ ಮುಳುಗಿರುವ ಶವಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಇಬ್ಬರ ಶವ ಪತ್ತೆಯಾಗಿದ್ದು, ಮತ್ತಿಬ್ಬರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ವಾಹನ ಗುದ್ದಿ ವ್ಯಕ್ತಿ ಸಾವು:ಸ್ಕೂಟಿ ಹಾಗೂ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಡಿಕೇರಿಯ ಸುದರ್ಶನ ವೃತ್ತದ ಬಳಿ ಭಾನುವಾರ ನಡೆದಿದೆ. ಮೃತ ವ್ಯಕ್ತಿಯನ್ನು ಎರಡನೇ ಮೊಣ್ಣಂಗೇರಿ ನಿವಾಸಿ ಧನಂಜಯ್ ಎಂದು ಗುರುತಿಸಲಾಗಿದೆ. ಮಡಿಕೇರಿ ಮತ್ತು ಸಿದ್ದಾಪುರ ರಸ್ತೆಯಲ್ಲಿ ಸ್ನೇಹಿತನ ಮನೆಗೆ ಊಟಕ್ಕೆ ತೆರಳುವಾಗ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.