ಬೆಂಗಳೂರು: ರಾಜ್ಯಾದ್ಯಂತ ಬಹುದಿನಗಳ ನಿರೀಕ್ಷೆಯಾದ ಹಾಗೂ ಕೊರೊನಾ ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿಯ ಮಧ್ಯೆಯೂ ನಡೆಯುತ್ತಿರುವ ಎಸ್ಎಸ್ಎಲ್ಸಿ ಪರೀಕ್ಷೆ ರಾಜ್ಯದೆಲ್ಲೆಡೆ ಯಾವುದೇ ವ್ಯತ್ಯಯವಿಲ್ಲದೇ ಅತ್ಯಂತ ಯಶಸ್ವಿಯಾಗಿ ನಡೆದು ಇತಿಹಾಸವನ್ನೇ ಸೃಷ್ಟಿಸಿದೆ ಎಂದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ವಿವರಿಸಿದ ಅವರು, ಮೊದಲನೇೆ ದಿನವಾದ ಇಂದು ನಡೆದ ದ್ವಿತೀಯ ಭಾಷೆ ಆಂಗ್ಲ ಮತ್ತು ಕನ್ನಡ ವಿಷಯಗಳ ಪರೀಕ್ಷೆಗೆ ನೊಂದಾಯಿತ 7,85,140 ವಿದ್ಯಾರ್ಥಿಗಳ ಪೈಕಿ 7,71,878 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 98.3 ರಷ್ಟು ಇಂದು ಹಾಜರಾತಿ ಇದೆ. 13,212 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮೊದಲ ಬಾರಿಗೆ 7,43,688 ಶಾಲಾ ವಿದ್ಯಾರ್ಥಿಗಳು ಹಾಗೂ 20,892 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ತಾವು ಬೆಂಗಳೂರಿನ 12 ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದರು. ಇನ್ನು ರಾಜ್ಯದಲ್ಲಿ ಸುಮಾರು 13 ಮಂದಿ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಅವರಿಗೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಕಂಟೈನ್ಮೆಂಟ್ನಿಂದ ಬಂದ ವಿದ್ಯಾರ್ಥಿಗಳೆಷ್ಟು? ಅನಾರೋಗ್ಯ ಕಾರಣ ಇದ್ದರೂ ಪರೀಕ್ಷೆ ಬರೆದವರು ಯಾರು??
ಕಂಟೈನ್ಮೆಂಟ್ ಪ್ರದೇಶಗಳಿಂದ 998 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 201 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಯವುದೇ ವಿದ್ಯಾರ್ಥಿಯೂ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಪ್ರಕರಣಗಳು ಇಲ್ಲ. ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1,438 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ನೆರೆ ರಾಜ್ಯ ಹಾಗೂ ವಲಸೆ ಕಾರ್ಮಿಕ ವಿದ್ಯಾರ್ಥಿಗಳು
ನೆರೆ ರಾಜ್ಯಗಳಿಂದ 614 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 59 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 555 ಮಂದಿ ಪರೀಕ್ಷೆ ಬರೆದಿದ್ದಾರೆ.
12,644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 12,548 ವಿದ್ಯಾರ್ಥಿಗಳು ಹಾಜರಾಗಿದ್ದರೆ, 96 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಗೈರು ವಿದ್ಯಾರ್ಥಿಗಳಿಗೆ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು.