ಕರ್ನಾಟಕ

karnataka

ETV Bharat / state

12 ಗಂಟೆ ಕೆಲಸ ಮಾಡುವ ಕಾಯ್ದೆ ವಾಪಸ್​ ಪಡೆದು ಮೊದಲಿನಂತೆ 8 ತಾಸಿಗೆ ಇಳಿಸಲು ಕ್ರಮ: ಸಿಎಂ ಭರವಸೆ - ಸಚಿವರ ಸಭೆ

ಬಲವಂತವಾಗಿ ರೈತರ ಸಾಲ ವಸೂಲಾತಿ ಮಾಡಬಾರದು ಎಂದು ರಾಷ್ಟ್ರೀಯ ಬ್ಯಾಂಕ್​ಗಳಿಗೆ ಸೂಚಿಸಲಾಗುವುದು. ಬಗರ್ ಹುಕುಂ, ಅಕ್ರಮ - ಸಕ್ರಮ, ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಶೀಘ್ರದಲ್ಲಿ ಸಚಿವರ ಸಭೆ ಕರೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

leaders appealed to the CM
ವಿವಿಧ ನಿಯೋಗದ ಮುಖಂಡರು ಸಿಎಂಗೆ ಮನವಿ ಸಲ್ಲಿಸಿದರು.

By ETV Bharat Karnataka Team

Published : Jan 18, 2024, 9:54 PM IST

ಬೆಂಗಳೂರು:ಸಿಎಂ ಸಿದ್ದರಾಮಯ್ಯ ಅವರು ದುಡಿಯುವ ಸಮುದಾಯಗಳ ಸಮಸ್ಯೆ ಪರಿಹಾರಕ್ಕೆ ಇಂದು ಹಲವು ಮಹತ್ವದ ಘೋಷಣೆಗಳನ್ನು ಮಾಡಿದರು. ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯೋಜನಾ ಹಾಗೂ ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯ ನೇತೃತ್ವದ ಸಂಯುಕ್ತ ಹೋರಾಟ ವೇದಿಕೆ ಪದಾಧಿಕಾರಿಗಳು ಮತ್ತು ಮುಖಂಡರ ನಿಯೋಗದ ಜತೆ ಸಿಎಂ ಸಿದ್ದರಾಮಯ್ಯ ಅವರು ಸುದೀರ್ಘ ಚರ್ಚೆ ನಡೆಸಿ ಈ ಘೋಷಣೆ ಮಾಡಿದರು.

ಭೂ ಸ್ವಾಧೀನ, ಗೋ ಹತ್ಯೆ ನಿಷೇಧ ಕಾಯ್ದೆ, ಬಗರ್ ಹುಕುಂ, ಕಾರ್ಮಿಕರಿಗೆ 12 ಗಂಟೆಗಳ ಕೆಲಸ ಕಡ್ಡಾಯ ಕಾಯ್ದೆ ನಿಷೇಧ, ಗ್ರಾಮೀಣ ಬ್ಯಾಂಕ್​ಗಳಲ್ಲಿ ರೈತರ ಸಾಲಕ್ಕೆ ಒಟಿಎಸ್ ವ್ಯವಸ್ಥೆ , ಫ್ರೀಡಂ ಪಾರ್ಕನ್ನು ಹೋರಾಟಗಳಿಗೆ ಮೀಸಲಿಡುವುದು ಸೇರಿದಂತೆ ಹಲವು ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಸಂಘದ ಸದಸ್ಯರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಬಲವಂತವಾಗಿ ರೈತರ ಸಾಲ ವಸೂಲಾತಿಯನ್ನು ಮಾಡಬಾರದೆಂದು ಸಹಕಾರಿ ಹಾಗೂ ರಾಷ್ಟ್ರೀಯ ಬ್ಯಾಂಕ್​ಗಳಿಗೆ ಸೂಚಿಸಲಾಗುವುದು. ಬಗರ್ ಹುಕುಂ, ಅಕ್ರಮ - ಸಕ್ರಮ, ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಉಪ ಮುಖ್ಯಮಂತ್ರಿಗಳು ಕಂದಾಯ, ಅರಣ್ಯ, ಕೃಷಿ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಸಭೆಯನ್ನು ಶೀಘ್ರದಲ್ಲಿ ಕರೆಯಲಾಗುವುದು ಎಂದು ಹೇಳಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿಧಾನಪರಿಷತ್​​ನಲ್ಲಿ ಅನುಮೋದನೆಯಾಗಿಲ್ಲ. ಜಂಟಿ ಸಮಿತಿಯಲ್ಲಿ ಇದಕ್ಕೆ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ, 2023 ರಡಿ 12 ಗಂಟೆ ಕೆಲಸ ಮಾಡುವ ಕಾಯ್ದೆ ಕಡ್ಡಾಯವಾಗಿ ಆಗಬೇಕೆಂದು ಇಲ್ಲ. ಈ ಬಗ್ಗೆ ಪರಿಶೀಲಿಸಿ ಅದನ್ನು ವಾಪಸ್​ ಪಡೆದು ಮೊದಲಿನಂತೆ 8 ಗಂಟೆಗಳಿಗೆ ಇಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಭೂ ಸುಧಾರಣಾ ಕಾಯ್ದೆ 79 ಎ ಹಾಗೂ ಬಿ ಪರಿಚ್ಛೇದಕ್ಕೆ ತಂದಿರುವ ತಿದ್ದುಪಡಿ ಸರಿಪಡಿಸಲಾಗುವುದು. ಸರ್ಕಾರ ಕಾನೂನಾತ್ಮಕವಾಗಿ ಮಾಡಬಹುದಾದ ಎಲ್ಲ ಕ್ರಮವನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬು ಕುಮಾರ್, ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಹಶೀನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಉಪಸ್ಥಿತರಿದ್ದರು.

ಇದನ್ನೂಓದಿ:ಶ್ರೀರಾಮನ ಕುರಿತು ಲಘು ಹೇಳಿಕೆ, ರಾಜಣ್ಣ ಪರ ಸಿಎಂ ಕ್ಷಮೆ ಕೇಳಲಿ: ಡಿ ವಿ ಸದಾನಂದ ಗೌಡ ಆಗ್ರಹ

ABOUT THE AUTHOR

...view details