ಬೆಂಗಳೂರು:ಕೋವಿಡ್ ಸೃಷ್ಟಿಸಿದ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲ ಭಾಗವಾಗಿ ಕರ್ನಾಟಕ ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಲೋಕಾರ್ಪಣೆಗೊಳಿಸಿದ ಡಿಜಿಟಲ್ ಗ್ರಂಥಾಲಯ ಮೊಬೈಲ್ ಆ್ಯಪ್ನಲ್ಲಿ ಪ್ರಸ್ತುತ ಒಂದು ಲಕ್ಷ ಪುಸ್ತಕಗಳು ಲಭ್ಯವಿದೆ. ಇನ್ನು, 10 ಲಕ್ಷ ಪುಸ್ತಕಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಜಾಜಿನಗರದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಈ ಆ್ಯಪ್ನ್ನು 7 ಲಕ್ಷಕ್ಕೂ ಹೆಚ್ಚು ಜನ ಬಳಸುತ್ತಿದ್ದಾರೆ. ಇದು ಸಾರ್ವಕಾಲಿಕ ದಾಖಲೆಯಾಗಿದ್ದು, ಪಠ್ಯಪುಸ್ತಕ, ಸಾಮಾನ್ಯಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆಗಳು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತ ಲೇಖಕರ ಪುಸ್ತಕಗಳು ಹಾಗೆಯೇ ವಿಡಿಯೋಗಳು, ಇ-ಪುಸ್ತಕಗಳು ಸೇರಿದಂತೆ 10 ಲಕ್ಷ ಪುಸ್ತಕಗಳನ್ನು ಸೇರ್ಪಡೆಗೊಳಿಸಲು ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂದಿನ ಮೂರು ತಿಂಗಳೊಳಗೆ 10 ಲಕ್ಷ ಪುಸ್ತಕಗಳು ಲಭ್ಯವಾಗಲಿವೆ ಎಂದರು.
ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಬೆರಳೆಣಿಕೆ ಸಂಖ್ಯೆಯ ಗ್ರಂಥಾಲಯಗಳಿವೆ ಎಂಬ ಮಾಹಿತಿ ಇದೆ. ಕರ್ನಾಟಕ ಗ್ರಂಥಾಲಯ ಇಲಾಖೆ ಇಡೀ ದೇಶದಲ್ಲೇ ಮಂಚೂಣಿಯಲ್ಲಿದೆ. ದೇಶದಲ್ಲಿಯೇ ಅತಿಹೆಚ್ಚು ಹಾಗೂ ಅತ್ಯುತ್ತಮ ಗ್ರಂಥಾಲಯಗಳನ್ನು ಹೊಂದಿರುವುದು ಕರ್ನಾಟಕ ಮಾತ್ರ.
ಪುಸ್ತಕ ಸಂಸ್ಕೃತಿ ಬೆಳೆಸಲು ಬೆಂಗಳೂರಿನಲ್ಲಿ 205 ಮತ್ತು ರಾಜ್ಯದಲ್ಲಿ 7000ಕ್ಕೂ ಹೆಚ್ಚು ಗ್ರಂಥಾಲಯಗಳಿದ್ದು, ಇದು ರಾಷ್ಟ್ರೀಯ ದಾಖಲೆಯಾಗಿದೆ. ಡಿಜಿಟಲ್ ಗ್ರಂಥಾಲಯಕ್ಕೆ ಸುಮಾರು 7 ಲಕ್ಷ ಸದಸ್ಯರು ಚಂದಾದಾರರಾಗಿದ್ದಾರೆ. ರಾಜ್ಯದ ಎಲ್ಲ ಗ್ರಾಮೀಣ ಗ್ರಂಥಾಲಯಗಳಿಗೆ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸುವ ಯೋಜನೆ ಸರ್ಕಾರದ ಮುಂದಿದ್ದು, ಈ ಕುರಿತು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.