ಬೆಂಗಳೂರು: ಬರ ಘೋಷಣೆ ಆಗುವ ತಾಲೂಕುಗಳಿಗೆ ಪಡಿತರ ಅಕ್ಕಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು. ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರ ಎಂದು ಘೋಷಿಸುವ ಎಲ್ಲ ತಾಲೂಕಿನಲ್ಲಿ 10 ಕೆಜಿ ಅಕ್ಕಿ ವಿತರಣೆ ಮಾಡಲಿದ್ದೇವೆ. ಮನೆಯ ಪ್ರತೀ ಸದಸ್ಯರಿಗೆ 10 ಕೆಜಿ ಅಕ್ಕಿ ವಿತರಿಸಲು ನಿರ್ಧರಿಸಲಾಗಿದೆ. ಸುಮಾರು 114 ತಾಲೂಕುಗಳನ್ನ ಬರಪೀಡಿತ ತಾಲೂಕು ಎಂದು ಘೋಷಿಸುವ ಸಾಧ್ಯತೆ ಇದೆ. ಹೀಗಾಗಿ 114 ತಾಲೂಕಿನ ಮನೆಯ ಪ್ರತೀ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲು ತಯಾರಿ ನಡೆಸಿದ್ದೇವೆ ಎಂದರು.
ಬರ ಘೋಷಣೆ ಆಗ್ತಿದ್ದಂತೆ 10 ಕೆಜಿ ಅಕ್ಕಿ ವಿತರಿಸಲು ಬೇಕಾದ ವ್ಯವಸ್ಥೆ ಮಾಡಿಕೊಂಡಿರುವ ಆಹಾರ ಇಲಾಖೆ, ಸದ್ಯ ಐದು ಕೆಜಿ ಹಣದ ಬದಲು ಅಕ್ಕಿ ನೀಡಲಾಗುವುದು. ರಾಜ್ಯ ಸರ್ಕಾರದ ಅನ್ನಭಾಗ್ಯದಡಿ ಅಕ್ಕಿ ಕೊರತೆ ಹಿನ್ನೆಲೆ ಐದು ಕೆಜಿ ಅಕ್ಕಿ ಬದಲು ಬಿಪಿಎಲ್ ಪಡಿತರದಾರರಿಗೆ ಮಾಸಿಕ 170 ರೂ. ನಗದು ವರ್ಗಾವಣೆ ಮಾಡಲಾಗುತ್ತಿದೆ. ಆದರೆ, ಬರ ಎಂದು ಘೋಷಿಸಲ್ಪಡುವ ತಾಲೂಕುಗಳಲ್ಲಿ ಹಣದ ಬದಲು ಐದು ಅಕ್ಕಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಉಚಿತ ಸ್ಕೀಂಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟೀಕೆ ವಿಚಾರವಾಗಿ ಮಾತನಾಡಿ, ದೇಶದಲ್ಲಿ 35 ರಿಂದ 37ರಷ್ಟು ಬಡತನ ರೇಖೆಗಿಂತ ಕೆಳಗಿನ ಜನರಿದ್ದಾರೆ. ಯುಪಿಎ ಇದ್ದಾಗ ಆಹಾರ ಭದ್ರತಾ ಕಾಯ್ದೆ ತಂದೆವು. ಯಾರೂ ಕೂಡ ಕೆಲಸ ಇಲ್ಲದೇ ಮಲಗಬಾರದು ಅಂತ ನರೇಗಾ ಯೋಜನೆ ತಂದೆವು. ಈ ಆಹಾರ ಭದ್ರತಾ ಕಾಯಿದೆಯಿಂದ ಜನರಿಗೆ ಅನುಕೂಲ ಆಗುತ್ತಿದೆ ಎಂದು ಹೇಳಿದರು.