ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿ ನಡೆಸಿ, ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ಮತದಾರರಿಗೆ ಮೂರನೇ ಕೊಡುಗೆಯನ್ನು ಘೋಷಣೆ ಮಾಡಿದರು.
'ರಾಜ್ಯಕ್ಕೆ ಬಿಜೆಪಿ ಮಾಡಲಾಗದ ಕೆಲಸವನ್ನು ನಾವು ಮಾಡಬೇಕೆಂದು ಈ ದಿನ ಸಂಕಲ್ಪ ಮಾಡಿ ಎರಡು ಘೋಷಣೆಗಳನ್ನು ಮಾಡಿದ್ದೇವೆ. ಬಹುಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಘೋಷಿಸಿದ್ದೇವೆ. ನಾವು ಬಸ್ ಯಾತ್ರೆ ನಡೆಸುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಅನ್ನಭಾಗ್ಯಯೋಜನೆ ಮರು ಆರಂಭಿಸುವಂತೆ ಜನರು ಒತ್ತಾಯ ಮಾಡಿದ್ದಾರೆ. ಈಗಾಗಲೇ ನಮ್ಮ ಪಕ್ಷದ ನಾಯಕರ ಜೊತೆ ಈ ಕುರಿತು ಚರ್ಚಿಸಿ, ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಅಕ್ಕಿಯನ್ನು 7 ರಿಂದ 5 ಕೆಜಿಗೆ ಇಳಿಸಿರುವುದು ಜನರಿಗೆ ದೊಡ್ಡ ಹೊಡೆತ ನೀಡಿದೆ. ಇದರಿಂದ ನಾವು ಮತದಾರರಿಗೆ ಮೂರನೇ ಗ್ಯಾರಂಟಿ ನೀಡಲು ಸಮಾವೇಶಗೊಂಡಿದ್ದೇವೆ' ಎಂದು ಡಿಕೆಶಿ ಹೇಳಿದರು.
ಅನ್ನಭಾಗ್ಯ ಯೋಜನೆ ಇಡೀ ದೇಶಕ್ಕೆ ಮಾದರಿಯಾಗುವ ರೀತಿ ಕಾರ್ಯ ನಿರ್ವಹಿಸಿದೆ. ಪ್ರತಿ ಮನೆಯಲ್ಲೂ ಬಿಪಿಎಲ್ ಕಾರ್ಡ್ ಹೊಂದಿದ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ನೀಡುವ ನೂತನ ಯೋಜನೆಯನ್ನು ಘೋಷಿಸುತಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ ಈಗ ನೀಡುತ್ತಿರುವ 7 ಕೆ ಜಿ ಅಕ್ಕಿಯನ್ನು ಪಡೆಯುವವರಿಗೆ 10 ಕೆ.ಜಿ ನೀಡುತ್ತೇವೆ. ನಾವು 7 ಕೆಜಿ ನೀಡುತ್ತಿದ್ದ ಅಕ್ಕಿಯನ್ನು ಈಗಿನ ಸರ್ಕಾರ 5 ಕೆಜಿಗೆ ಇಳಿಸಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, 'ನಾವು ಅಧಿಕಾರಕ್ಕೆ ಬಂದ ಒಂದು ಗಂಟೆಯಲ್ಲಿ ಕೈಗೊಂಡ ಕ್ರಮ ಇದು. ತಿಂಗಳಿಗೆ 30 ಕೆಜಿ ಅಕ್ಕಿ ನೀಡುವ ತೀರ್ಮಾನ ಕೈಗೊಂಡಿದ್ದೆವು. ನಂತರ ತಲಾ 7 ಕೆಜಿ ಅಕ್ಕಿ ನೀಡಲು ತೀರ್ಮಾನಿಸಿದೆವು. ಮೊದಲು ಜನರಿಂದ 2 ರೂ. ಹಾಗೂ ಸರ್ಕಾರದಿಂದ ಮೂರು ರೂ. ಹಾಕಿ 5 ರೂ ಗೆ ಒಂದು ಕೆಜಿಯಂತೆ ತಿಂಗಳಿಗೆ 30 ಕೆಜಿ ಅಕ್ಕಿ ನೀಡಲು ನಿರ್ಧರಿಸಿದ್ದೆವು.
ನಂತರ ಇದನ್ನು ಪ್ರತಿ ವ್ಯಕ್ತಿಗೆ 7 ಕೆ.ಜಿ ರೂಪದಲ್ಲಿ ಉಚಿತವಾಗಿ ನೀಡಲು ತೀರ್ಮಾನಿಸಿ ಆದೇಶ ಹೊರಡಿಸಿದೆವು. ಇದೀಗ ಸರ್ಕಾರದ ಐದು ಕೆಜಿಗೆ ಇಳಿಸಿದೆ. ನಾವು ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಜನ ನೀವು ಅಧಿಕಾರಕ್ಕೆ ಬಂದಾಗ ಇದನ್ನ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ನಾವು ನಮ್ಮ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿದ್ದೇವೆ. ಹಸಿದವರಿಗೆ ಹೊಟ್ಟೆ ತುಂಬ ಊಟ ನೀಡಬೇಕೆಂಬ ತೀರ್ಮಾನ ಕೈಗೊಂಡು ಈ ನಿರ್ಧಾರ ಮಾಡಿದ್ದೇವೆ' ಎಂದು ತಿಳಿಸಿದರು.