ಆನೇಕಲ್:ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸ್ಥಳೀಯ ಮುಖಂಡರು ಇತ್ಯರ್ಥವಾಗದ ಜಾಗದ ಕಟ್ಟಡ ಹಾಗೂ ಶೆಡ್ ನಿರ್ಮಿಸಿದ್ದಾರೆ ಎಂದು ನೊಂದ ಮಹಿಳೆಯೊಬ್ಬರು ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಾಯಿ ಪಿರಾಣಿಯಮ್ಮನನ್ನು ಯಾಮಾರಿಸಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಬೋರ್ಡ್ ಒಂದಕ್ಕೆ ವರ್ಗಾಯಿಸಿದ ಪ್ರಕರಣ ತಾಲೂಕಿನ ಸರ್ಜಾಪುರ ಹೋಬಳಿಯಲ್ಲಿ ನಡೆದಿದೆ. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದೀಗ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಲ್ಲಿ ತಮಗೆ ಏನೇನು ಬೇಕೋ ಅದನ್ನು ಮಾಡುತ್ತಿದ್ದಾರೆ. ಕೇಳಿದರೆ ನಮ್ಮನ್ನು ಯಾರೂ ಕೇಳುವಂತಿಲ್ಲ. ಬೋರ್ಡ್ ಈ ಬಗ್ಗೆ ಒಪ್ಪಿಗೆ ನೀಡಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಪಿರಾಣಿಯಮ್ಮನ ಮಗಳಾದ ನೂರುನ್ನೀಸಾ ಎಂಬ ಮಹಿಳೆ ಆರೋಪಿಸಿದ್ದಾರೆ.
ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡ ನೊಂದ ಮಹಿಳೆ ನೂರುನ್ನೀಸಾ ಈ ಜಾಗದಲ್ಲಿ ಯಾವುದೇ ಚಟುವಟಿಕೆಗಳು ನಡೆಯದಂತೆ ಹಾಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಏನೂ ಇಲ್ಲದ ಜಾಗದಲ್ಲಿ ರಾತ್ರಿ ವೇಳೆ ದರ್ಗಾ ತರಹದ ಕಟ್ಟಡ ಕಟ್ಟುವ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ. ಅಲ್ಲದೆ ಸ್ಥಳೀಯ ಪ್ರಭಾವಿಗಳ ಕುಮ್ಮಕ್ಕಿನಿಂದ ಪ್ರತಿ ವರ್ಷ ಉರುಸು ನಡೆಸುವ ಮುಖಾಂತರ ತಮ್ಮನ್ನು ಹೆದರಿಸಿ ಬೆದರಿಸಿ ಜಾಗ ಕಬಳಿಸುವ ಧಮ್ಕಿ ಹಾಕುತ್ತಿದ್ದಾರೆಂದು ನೂರುನ್ನೀಸಾ ನೋವು ತೋಡಿಕೊಂಡಿದ್ದಾರೆ.
ಸ್ಟೇ ವೆಕೇಟ್ ಆಗಿದೆ ಅಂತಿದ್ದಾರೆ ಸ್ಥಳೀಯ ಮುಖಂಡರು:
ಪಿರಾಣಿಯಮ್ಮನ ಜಾಗವೇ ಇಲ್ಲಿಲ್ಲ. ಇದೇನಿದ್ದರೂ ವಕ್ಫ್ ಬೋರ್ಡ್ಗೆ ಸೇರಿದ್ದು. ಹೈಕೋರ್ಟ್ನಲ್ಲಿನ ಸ್ಟೇ ಆದೇಶ ವೆಕೇಟ್ ಆಗಿದೆ. ಅನುಮತಿ ಪಡೆದೇ ಉರುಸು ಆಚರಿಸುತ್ತದ್ದೇವೆ. ಇದಕ್ಕೂ ಮುಂಚೆ 200ವರ್ಷಗಳಿಂದ ಉರುಸು ನಡೆಯುತ್ತಿದೆ ಎನ್ನುತ್ತಾರೆ ದರ್ಗಾ ಮುಖಂಡರು. ಆದರೆ, ಇವರು ಈ ವರೆಗೂ ದಾಖಲೆಗಳನ್ನು ಸಲ್ಲಿಸದೇ ಹೇಳಿಕೆಗಳನ್ನಷ್ಟೇ ನೀಡುತ್ತಿರುವುದು ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎನ್ನಲಾಗುತ್ತಿದೆ.