ಕರ್ನಾಟಕ

karnataka

By ETV Bharat Karnataka Team

Published : Jan 15, 2024, 1:01 PM IST

Updated : Jan 15, 2024, 2:13 PM IST

ETV Bharat / state

ಜ.20ರಂದು ವಿವಿಧ ಮಠಾಧೀಶರೊಂದಿಗೆ ಅಯೋಧ್ಯೆಗೆ ಪಯಣ: ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ

ಅಯೋಧ್ಯೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಹಲವು ಮಠಗಳ ಸ್ವಾಮೀಜಿಗಳೊಂದಿಗೆ ತೆರಳುವುದಾಗಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದ್ದಾರೆ.

Valmiki Prasannanda Swamiji
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ

ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆ

ದೊಡ್ಡಬಳ್ಳಾಪುರ: ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದೆ. ಜ.20ರಂದು ಅಯೋಧ್ಯೆಗೆ ಪ್ರಯಾಣಿಸುತ್ತೇವೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.

ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ, ದಾವಣಗೆರೆಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಯ ಪೂರ್ವಸಿದ್ಧತೆಯ ಬಗ್ಗೆ ಸಭೆ ಆಯೋಜಿಸಲಾಗಿತ್ತು. ಈ ಸಭೆಯ ನಂತರ ರಾಮ ಪ್ರತಿಷ್ಠಾಪನಾ ಕಾರ್ಯಕ್ರಮದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, "ಹಲವು ಮಠಗಳ ಶ್ರೀಗಳೊಂದಿಗೆ ಆಯೋಧ್ಯೆಗೆ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ" ಎಂದು ಹೇಳಿದರು.

"ನಮ್ಮಲ್ಲಿರುವ ಒಗ್ಗಟ್ಟನ್ನು ಪ್ರದರ್ಶಿಸಲು ಸಮಾವೇಶ, ಜಾತ್ರಾ ಮಹೋತ್ಸವ, ಹಬ್ಬ-ಹರಿದಿನಗಳನ್ನು ಆಚರಣೆ ಮಾಡಲಾಗುತ್ತದೆ. ರಾಜ್ಯದಲ್ಲಿ ವಾಲ್ಮೀಕಿ ಸಮಾಜ ಬಲಿಷ್ಠವಾಗಿದೆ. ನಮ್ಮ ಬಲಿಷ್ಠತೆಯನ್ನು ಪ್ರದರ್ಶನ ಮಾಡಲು ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಫೆ.8 ಮತ್ತು 9ರಂದು ರಾಜನಹಳ್ಳಿಯಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿಸಿಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು" ಎಂದು ಮನವಿ ಮಾಡಿದರು.

"ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ‌ದ ಹೆಸರಿನಲ್ಲಿ ಅನ್ಯ ಸಮುದಾಯದವರು ನಕಲಿ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು ನಿಜವಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ‌ದವರ ಸವಲತ್ತುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಈಗಾಗಲೇ ನಕಲಿ ಜಾತಿ ಪ್ರಮಾಣ ಪತ್ರ ನೀಡಿದಂತಹ 175 ತಹಶೀಲ್ದಾರ್​ಗಳ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಸವರ್ಣೀಯರು ಪರಿಶಿಷ್ಟರ ಹೆಸರಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದು ಶೋಷಿತ ಸಮುದಾಯವನ್ನು ಅವಕಾಶಗಳಿಂದ ವಂಚಿಸುವುದು ಸರಿಯಲ್ಲ. ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು" ಎಂದು ಎಚ್ಚರಿಸಿದರು.

ಸಭೆಯಲ್ಲಿ, ತಾಲ್ಲೂಕು ಜಾತ್ರಾ ಸಮಿತಿ ಅಧ್ಯಕ್ಷರನ್ನಾಗಿ ಮುನಿರಾಜು (ಚಿಕ್ಕಪ್ಪಿ) ಅವರನ್ನು ಆಯ್ಕೆ ಮಾಡಲಾಯಿತು. ವಾಲ್ಮೀಕಿ ಸಮಾಜದ ಮುಖಂಡ ಮುನಿರಾಜು ಮಾತನಾಡಿ, "ಸ್ವಾಮೀಜಿ ಜಾತ್ರಾ ಮಹೋತ್ಸವದ ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಜವಾಬ್ದಾರಿ ವಹಿಸಿದ್ದಾರೆ. ಅವರ ವಿಶ್ವಾಸಕ್ಕೆ ಬದ್ಧನಾಗಿ ನಮ್ಮ ಸಮುದಾಯದ ಮುಖಂಡರು ಹಾಗೂ ಸಂಗಡಿಗರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತೇನೆ" ಎಂದರು.

ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಪ್ರೇಮ್ ಕುಮಾರ್, ಕೇಬಲ್ ರಾಮಚಂದ್ರ, ಹಿರಿಯ ಹೋರಾಟಗಾರ ಸಂಜೀವ್ ನಾಯಕ, ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ರಾಜ್ಯಾಧ್ಯಕ್ಷ ಸುಬ್ರಮಣಿ, ಕುಮಾರ್, ರಾಜಣ್ಣ, ಅಂಬರೀಶ್, ರಘು, ನವೀನ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಅಯೋಧ್ಯಾ ರಾಮಮಂದಿರದ ಪೂಜೆಗೆ 24 ಅರ್ಚಕರ ಪೈಕಿ ಇಬ್ಬರು ದಲಿತರಿದ್ದಾರೆ: ಈಶ್ವರಪ್ಪ

Last Updated : Jan 15, 2024, 2:13 PM IST

ABOUT THE AUTHOR

...view details