ಬೆಂಗಳೂರು:73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಿಲಿಕಾನ್ ಸಿಟಿಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ.
ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಯಾವ ರೀತಿ ಭದ್ರತೆ ತೆಗೆದುಕೊಳ್ಳಲಾಗಿದೆ ಅನ್ನುವುದರ ಮಾಹಿತಿ ನೀಡಿ, ಸ್ವಾತಂತ್ರ್ಯ ದಿನಚಾರಣೆಗೆ ಬೇಕಾಗಿರುವ ಎಲ್ಲಾ ರೀತಿಯ ಭದ್ರತೆಯನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ಮಾಣಿಕ್ ಷಾ ಪರೇಡ್ ಮೈದಾನದ ಸುತ್ತ 10 ದಿನಗಳಿಂದ ಭದ್ರತೆ ಹಾಗೂ ಸಿದ್ಧತೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಸ್ವಾತಂತ್ರ್ಯ ದಿನ ಬೆಳಗ್ಗೆ 8.5೦ ರಿಂದ 9.00 ಗಂಟೆಗೆ ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡಲಿದ್ದಾರೆ. ನಂತರ 34ಕ್ಕೂ ಹೆಚ್ಚು ತಂಡಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ.
ಇನ್ನು ಪೊಲೀಸ್ ಅಧಿಕಾರಿಗಳಿಗೆ ಭದ್ರತೆಯ ಜವಾಬ್ದಾರಿಯನ್ನು ನೀಡಿದ್ದು, ಅದರಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಅಧಿಕಾರಿಗಳು, ಸಂಚಾರಿಗೆ ಹೆಚ್ಚುವರಿ ಆಯುಕ್ತ, ಆಡಳಿತ ಆಯೋಜನೆ, ಸಂಪನ್ಮೂಲ ಸಿಸಿಬಿ ಹೆಚ್ಚುವರಿ ಆಯುಕ್ತ, 11 ಡಿಸಿಪಿ, 23 ಸಹಾಯಕ, 78 ಇನ್ಸ್ಪೆಕ್ಟರ್, 175 ಸಬ್ ಇನ್ಸ್ಪೆಕ್ಟರ್, 1108 ಪೇದೆಗಳು , ಮಹಿಳಾ ಸಿಬ್ಬಂದಿ 77 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಹಾಗೆಯೇ ಮಫ್ತಿ ಪೊಲೀಸರು 150 ಮಂದಿ, ಹೋಂ ಗಾರ್ಡ್ಸ್ಗಳು ಕೂಡಾ ಇದ್ದು, ಒಟ್ಟು 1906 ಜನ ಕಾರ್ಯನಿರ್ವಹಿಸಲಿದ್ದಾರೆ.
ಮಾಣಿಕ್ ಷಾ ಮೈದಾನದಲ್ಲಿ ಸೆಲ್ಫಿಗೆ ಕಡಿವಾಣ ಹಾಕುವಂತೆ ಕಮೀಷನರ್ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ. ಸೆಲ್ಫಿ ಕ್ರೇಜ್ ಜಾಸ್ತಿ ಆಗಿದೆ. ಇದರಿಂದ ಶಿಸ್ತು ಹಾಳಾಗುತ್ತದೆ. ಕಾರ್ಯಕ್ರಮ ನೋಡಲು ಬಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಗ್ರೌಂಡ್ನಲ್ಲಿ ಸಾರ್ವಜನಿಕರು ಶಿಸ್ತು ಪಾಲಿಸುವಂತೆ ಮನವಿ ಮಾಡಿದ್ದಾರೆ.