ಆನೇಕಲ್ (ಬೆಂ,ಗ್ರಾಮಾಂತರ):ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಪುಡಿ ಮಾಡಿ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಆನೇಕಲ್ನಲ್ಲಿ ನಡೆದಿದೆ. ಪುಡಿರೌಡಿಗಳು ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಪುಡಿ ರೌಡಿಗಳ ಅಟ್ಟಹಾಸಕ್ಕೆ ಆಹುತಿಯಾದ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ದೊಡ್ಡಕಮ್ಮನಹಳ್ಳಿ ಜನ ಘಟನೆಯಿಂದ ಭಯ ಭೀತರಾಗಿದ್ದಾರೆ. ಕೃತ್ಯ ಎಸಗಿದ ಕಿರಾತಕರನ್ನು ಈ ಹಿಂದೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ಗಳಾಗಿ ಗುರುತಿಸಿಕೊಂಡಿದ್ದ ಮಾಧು ಅಲಿಯಾಸ್ ಚೇತನ್ ಗೌಡ, ಶ್ರೀನಾಥ್ ಹಾಗೂ ಸಹಚರರು ಎಂದು ತಿಳಿದು ಬಂದಿದೆ.
ಕಳ್ಳತನ ಪ್ರಶ್ನಿಸಿದ್ದೇ ತಪ್ಪಾಯ್ತು:ಚಿಕ್ಕಕಮ್ಮನಹಳ್ಳಿ ಬಳಿ ನಿನ್ನೆ ಕಳೆದ ರಾತ್ರಿ ಕಳ್ಳತನ ಮಾಡಲು ಗ್ಯಾಂಗ್ ಮುಂದಾಗಿತ್ತು. ಇದೇ ಸಂದರ್ಭದಲ್ಲಿ ನಾರಾಯಣಸ್ವಾಮಿ ಮಕ್ಕಳಾದ ಗೌತಮ್ ಮತ್ತು ಹರ್ಷ ಬೈಕ್ ಮೂಲಕ ತೆರಳುತ್ತಿದ್ದರು. ಅಲ್ಲಿದ್ದವರ ಮೇಲೆ ಹಲ್ಲೆ ಮಾಡುತ್ತಿದ್ದ ಪುಂಡರ ತಂಡವನ್ನು ನೋಡಿ ಯಾಕೆ ಹಲ್ಲೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಗೌತಮ್ ಎಂಬುವರ ಕೈಯಲ್ಲಿ ಮೊಬೈಲ್ ಇದ್ದುದನ್ನು ನೋಡಿ ವಿಡಿಯೋ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಬಳಿಕ ಅದೇ ದ್ವೇಷ ಇಟ್ಟುಕೊಂಡು ಗೌತಮ್ ಮನೆಯ ಬಳಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿ ಕಾರಿಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹಲ್ಲೆಗೊಳಗಾದ ಗೌತಮ್ ತಿಳಿಸಿದ್ದಾರೆ.
ಇನ್ನು ಮೊನ್ನೆಯಷ್ಟೇ ಬನ್ನೇರುಘಟ್ಟ ಪೋಲಿಸ್ ಠಾಣಾ ವ್ಯಾಪ್ತಿಯ ಸಿಕೆ ಪಾಳ್ಯದ ಬಳಿ ಫೈನಾನ್ಸಿಯರ್ ಒಬ್ಬನ ಬಳಿ ಹಣ ವಸೂಲಿ ಮಾಡಲು ಸ್ಕೆಚ್ ಹಾಕಿ ಜೈಲಿನ ಮೂಲಕವೇ ಪುಡಿರೌಡಿಗಳ ಮೂಲಕ ಕಿಡ್ನ್ಯಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದರು. ಆದಾದ ಕೆಲವೇ ದಿನಗಳಲ್ಲಿ ಮತ್ತೆ ಪುಡಿ ರೌಡಿಗಳ ಅಟ್ಟಹಾಸಕ್ಕೆ ಸಾಕ್ಷಿಯಾಗಿದ್ದು ಬನ್ನೇರುಘಟ್ಟ , ಹುಳಿಮಾವು ವ್ಯಾಪ್ತಿಯ ಜನರು ಭಯಭೀತರಾಗಿದ್ದಾರೆ. ಇನ್ನು ಘಟನಾ ಸಂಬಂಧ ಸ್ಥಳಕ್ಕಾಗಮಿಸಿದ ಹುಳಿಮಾವು ಪೋಲಿಸರು ದೂರು ದಾಖಲು ಮಾಡಿಕೊಂಡು ಪರಿಶೀಲನೆ ನಡೆಸಿದ್ದು ಕೃತ್ಯ ಎಸಗಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.