ನೆಲಮಂಗಲ: ಮುಂದಿನ ವಾರದಿಂದ ಪಬ್, ಬಾರ್, ಕ್ಲಬ್‌ಗಳು ತೆರೆಯುವ ಸಾಧ್ಯತೆ ಇದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದರು.
ಮುಂದಿನ ವಾರದಿಂದ ಕ್ಲಬ್, ಪಬ್, ಬಾರ್ ತೆರೆಯುವ ಸಾಧ್ಯತೆ ನೆಲಮಂಗಲದ ಯುನೈಟೆಡ್ ಬ್ರೂವರೀಸ್ ಅಂಡ್ ಡಿಸ್ಟಿಲರೀಸ್‌ಗೆ ಅಬಕಾರಿ ಸಚಿವ ಹೆಚ್.ನಾಗೇಶ್ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಸಚಿವರು, ಕ್ಲಬ್‌ಗಳಲ್ಲಿ ಸ್ಪೋರ್ಟ್ಸ್ ಆಕ್ಟಿವಿಟೀಸ್ ಇಂದಿನಿಂದ ಶುರುವಾಗಿದೆ. ಊಟ ಹಾಗೂ ಡ್ರಿಂಕ್ಸ್ ಕ್ಯಾರಿ ಮಾಡುವ ಪದ್ಧತಿ ಇದೆ. ಎಲ್ಲಾ ಕಡೆ ಅಲ್ಲೆ ಕುಳಿತು ಊಟ ಸವಿಯಲು ಅನುಮತಿ ಕೊಟ್ಟಿದ್ದಿರಾ, ಕ್ಲಬ್‌ಗಳಲ್ಲು ಅನುಮತಿ ನೀಡಿ ಎಂದು ಸರ್ಕಾರಕ್ಕೆ ಕೇಳಿದ್ದೇನೆ. ಮುಂದಿನ ದಿನಗಳಲ್ಲಿ ಅನುಮತಿ ನೀಡುತ್ತಾರೆ ಎಂಬ ಆಶಾಭಾವನೆ ಇದೆ ಎಂದರು.
ನಮ್ಮ ಇಲಾಖೆಯಲ್ಲಿ 3,000 ಕೋಟಿ ಲಾಸ್ ಆಗಿದೆ. ಈಗ 2,000 ಕೋಟಿಗೆ ಬಂದು ನಿಂತಿದೆ. ಇನ್ನು 8 ತಿಂಗಳಲ್ಲಿ ನಷ್ಟವನ್ನ ಸರಿದೂಗಿಸಬೇಕು. ಬಾರ್, ಕ್ಲಬ್‌ಗಳು ಓಪನ್ ಆಗಿ ಸಭೆ, ಸಮಾರಂಭಗಳು ಎಲ್ಲ ಶುರುವಾದರೆ ಮಾರಾಟ ಹೆಚ್ಚಾಗುತ್ತದೆ. ಆಗ ಸರ್ಕಾರದ ಬೊಕ್ಕಸಕ್ಕೆ ಹಣ ಬರುತ್ತದೆ. ಅದರ ಬಗ್ಗೆ ನಾವು ಅಧಿಕಾರಿಗಳೊಡನೆ ನಿರಂತರ ಸಭೆ ನಡೆಸುತ್ತಿದ್ದೇವೆ. ನಮ್ಮ ಮುಂದೆ 25 ಸಾವಿರ ಕೋಟಿ ಟಾರ್ಗೆಟ್ ಇದೆ ಎಂದು ತಿಳಿಸಿದರು.
ಆನ್ಲೈನ್ನಲ್ಲಿ ಮದ್ಯ ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಬೇರೆ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳನ್ನ ನೇಮಕ ಮಾಡಿ ಈ ಯೋಜನೆ ಎಷ್ಟು ಯಶಸ್ವಿಯಾಗಿದೆ, ಜನರ ಅನಿಸಿಕೆ ಹೇಗಿದೆ, ಇದರ ಸಾಧಕ-ಭಾದಕಗಳ ಪರಿಶೀಲನೆ ವರದಿ ನೀಡಲು ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.