ಬೆಂಗಳೂರು:ರಾತ್ರಿ ವೇಳೆ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಲಾಂಗು ಮಚ್ಚು ತೋರಿಸಿ ಚಿನ್ನ, ಹಣವನ್ನು ದರೋಡೆ ಮಾಡುತ್ತಿದ್ದ ಗ್ಯಾಂಗ್ಅನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ವೇಳೆ ಜನರನ್ನು ಬೆದರಿಸಿ ದರೋಡೆ ಮಾಡ್ತಿದ್ದವರ ಬಂಧನ
ರಾತ್ರಿ ವೇಳೆ ವಾಹನಗಳನ್ನು ಅಡ್ಡಗಟ್ಟಿ ಲಾಂಗು ಮಚ್ಚು ತೋರಿಸಿ ಹೆದರಿಸಿ ಹಣ, ಒಡವೆ ದೋಚುತ್ತಿದ್ದ ಮೋಸ್ಟ್ ವಾಂಟೆಡ್ ದರೋಡೆಕೋರರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಡಿಬಂಡೆ ತಾಲೂಕಿನ ಸಂದೀಪ್ ರೆಡ್ಡಿ (23), ನಿವಾಸ್ ಎನ್.ವಿ. ಬಿನ್ ವೆಂಕಟೇಶಪ್ಪ (21), ಚಿಕ್ಕಬಳ್ಳಾಪುರ ಜಿಲ್ಲೆಯ ನವೀನ್ (19), ರಜನಿಕಾಂತ್ (22), ಇದೇ ಜಿಲ್ಲೆಯ ನಿವಾಸ್ ಬಿನ್ ರಾಮಚಂದ್ರಪ್ಪ (23), ಪ್ರದೀಪ್ (23) ಬಂಧಿತ ಆರೋಪಿಗಳು. ಇವರ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಬಂಧಿತರಿಂದ ಲಾಂಗ್, ಲ್ಯಾಪ್‌ಟಾಪ್, ಚಿನ್ನದ ಒಡವೆಗಳು ಸೇರಿದಂತೆ 18,763,00 ರೂ.ಗಳಷ್ಟು ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಮೋಹನ್ ತಿಳಿಸಿದ್ರು.
ಬೆಂಗಳೂರು ಗ್ರಾಮಾಂತರ, ನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗಿತ್ತು. ಸಂದೀಪ್ ರೆಡ್ಡಿ ನೇತೃತ್ವದ ಗ್ಯಾಂಗ್ ರಾತ್ರಿ ವೇಳೆ ವಾಹನಗಳನ್ನು ಅಡ್ಡಗಟ್ಟಿ ಜನರಿಗೆ ಲಾಂಗ್ ತೋರಿಸಿ ದರೋಡೆ ಮಾಡುತ್ತಿತ್ತು. ಬಂಧಿತ ದರೋಡೆಕೋರರ ಗ್ಯಾಂಗ್ನಲ್ಲಿ ಒಬ್ಬ ಬಾಲಕ ಇದ್ದು, ಅವನ ಮೇಲೆ ನಾಲ್ಕು ಪ್ರಕರಣಗಳು ದಾಖಲಾಗಿವೆ. ಇನ್ನೂ ಹಲವು ಜನರು ಈ ಟೀಂನಲ್ಲಿರುವ ಅನುಮಾನವಿದ್ದು, ಅವರನ್ನು ವಶಕ್ಕೆ ಪಡೆಯಲು ಬಲೆ ಬೀಸಲಾಗಿದೆ. ಬಂಧಿತ ಆರೋಪಿಗಳಿಂದ ಒಂದು ಕಾರು, ಚಿನ್ನದ ಉಂಗುರ, ಎರಡು ಮೋಟಾರ್ ಸೈಕಲ್, ಮೂರು ಲಾಂಗುಗಳು, ಒಂದು ಲ್ಯಾಪ್‌ಟಾಪ್, ನಾಲ್ಕು ಮೊಬೈಲ್, ಒಂದು ಚಿನ್ನದ ತಾಳಿ ಮತ್ತು ಒಂದು ಬೆಳ್ಳಿ ಚೈನ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.