ನೆಲಮಂಗಲ : ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷೆ ಪತಿಯ ದರ್ಬಾರ್, ಅಭಿವೃದ್ಧಿ ಕೆಲಸಗಳಲ್ಲಿ ಹಿನ್ನಡೆ ಮತ್ತು ಏಕಪಕ್ಷಿಯ ನಿರ್ಧಾರದಿಂದ ಬೇಸತ್ತ ಸದಸ್ಯರು ಅವಿಶ್ವಾಸ ಮಂಡನೆ ಮೂಲಕರ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ.
ಸೋಂಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ವೆಂಕಟ ಲಕ್ಷ್ಮಮ್ಮ ಕಾರ್ಯ ವೈಖರಿ ಬಗ್ಗೆ ಬೇಸತ್ತ ಸದಸ್ಯರು, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಡಾ.ಹರೀಶ್ ಕುಮಾರ್ ನೇತೃತ್ವದಲ್ಲಿ ಒಟ್ಟು 22 ಜನ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.
ಒಟ್ಟು 25 ಜನ ಸದಸ್ಯರ ಬಲವುಳ್ಳ ಸೋಂಪುರ ಗ್ರಾಮಪಂಚಾಯತ್ನಲ್ಲಿ, 22 ಜನ ಸದಸ್ಯರು ಅಧ್ಯಕ್ಷೆ ವೆಂಕಟ ಲಕ್ಷ್ಮಮ್ಮ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಸದಸ್ಯರ ಅವಿಶ್ವಾಸ ಸಿಂಧುವಾಗಿದ್ದು, ತಕ್ಷಣವೇ ಅಧ್ಯಕ್ಷರನ್ನು ಸ್ಥಾನದಿಂದ ವಜಾಗೊಳಿಸಲಾಗಿದೆ. ಮುಂದಿನ ಅಧ್ಯಕ್ಷರ ಚುನಾವಣೆ ಆಗುವರೆಗೆ ಉಪಾಧ್ಯಕ್ಷೆ ಮಂಜುಳಾ, ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ದ ಸದಸ್ಯರಿಂದ ಅವಿಶ್ವಾಸ ಮಂಡನೆ ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಪುರುಷೋತ್ತಮ್ ಮಾತನಾಡಿ, ಸೋಂಪುರ ಗ್ರಾಮ ಪಂಚಾಯತ್ ಕೈಗಾರಿಕಾ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದ್ದು, ಒಟ್ಟು 25 ಜನ ಸದಸ್ಯ ಬಲವುಳ್ಳ ಅಭಿವೃದ್ದಿ ಹೊಂದಿದ ಗ್ರಾಮ ಪಂಚಾಯಿತಿ ಆಗಿದೆ. ಗ್ರಾಮಪಂಚಾಯತ್ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮಿಸಲಾಗಿದ್ದು, ಕಳೆದ ನಾಲ್ಕು ವರ್ಷಗಳಿಂದಲೂ ಅಧ್ಯಕ್ಷೆ ವೆಂಕಟ ಲಕ್ಷಮ್ಮ ನೇತೃತ್ವಲ್ಲಿ ಪಂಚಾಯತ್ ಆಡಳಿತ ನೆಡೆದುಕೊಂಡು ಬಂದಿದೆ. ಆದರೆ, ಇತ್ತೀಚೆಗೆ ಪಂಚಾಯತ್ನಲ್ಲಿ ಅಧ್ಯಕ್ಷೆ ಪತಿಯ ದಬ್ಬಾಳಿಕೆ ನಡೆಯುತ್ತಿದ್ದು, ಅಲ್ಲದೆ ಅಭಿವೃದ್ದಿ ಕೆಲಸಗಳಲ್ಲೂ ಹಿನ್ನೆಡೆಯಾಗಿದೆ. ಇವೆಲ್ಲದರಿಂದ ಬೇಸತ್ತ 22 ಜನ ಸದಸ್ಯರು, ಒಟ್ಟಾಗಿ ಜಿಲ್ಲಾಧಿಕಾರಿಗಳು ದಿನಾಂಕ ನಿಗದಿಪಡಿಸಿದಂದು ಅವಿಶ್ವಾಸ ಮಂಡನೆ ಮಾಡಿದ್ದೇವೆ. ಮುಂದಿನ ಅಧ್ಯಕ್ಷ ಸ್ಥಾನಕ್ಕೆ ನಮ್ಮ ಸದಸ್ಯರಲ್ಲೇ ಒಬ್ಬರಾದ ಭಾರತೀಪುರದ ಲಕ್ಷ್ಮೀದೇವಿ ಎಂಬುವರನ್ನು ಒಮ್ಮತದಿಂದ ಅಧ್ಯಕ್ಷರನ್ನಾಗಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.