ಕರ್ನಾಟಕ

karnataka

ETV Bharat / state

ಚಿನ್ನ ಸಾಗಿಸಲು ವಿಶೇಷ ಒಳ ಉಡುಪು ಧರಿಸಿದ್ದ ಚಾಲಾಕಿಗಳು.. ಅಕ್ರಮ ಭೇದಿಸಿದ ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳು

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಚಿನ್ನ ಸಾಗಣೆಯನ್ನು ತಡೆಹಿಡಿದಿದ್ದಾರೆ.

illegal gold seized
ಅಕ್ರಮ ಚಿನ್ನ ವಶ

By

Published : Apr 10, 2023, 12:34 PM IST

Updated : Apr 10, 2023, 5:00 PM IST

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಸೀಜ್ ಮಾಡಿದ್ದಾರೆ. ಅಂದಹಾಗೆ ಮಲೇಶಿಯಾದಿಂದ ಪ್ರಯಾಣಿಕರು ಏರ್​ಪೋರ್ಟ್​ಗೆ ಬಂದಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಂದು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ.

ಈ ವೇಳೆ ಚಿನ್ನ ಕಳ್ಳ ಸಾಗಣಿಕೆಗಾಗಿಯೇ ವಿಶೇಷ ಒಳ ಉಡುಪು ಮಾಡಿಸಿದ್ದು ಕಂಡು ಬಂದಿದೆ. ಇನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಗೊತ್ತಾಗದಂತೆ ಒಳ ಉಡುಪಿನಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಸಾಗಣೆಗೆ ಯತ್ನ ನಡೆಸಿದ್ದರು ಎಂದು ಗೊತ್ತಾಗಿದೆ‌. ಹಾಗೆಯೇ ಪೇಸ್ಟ್ ರೂಪದಲ್ಲಿ ತಂದಿದ್ದ 2.2 ಕೆಜಿಯ 1 ಕೋಟಿ 33 ಲಕ್ಷ ಮೌಲ್ಯದ ಚಿನ್ನ ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಇಕೆ 568 ವಿಮಾನದಲ್ಲಿ ಬಂದಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಕೆ.ವಿ. ನಿಲ್ದಾಣದಲ್ಲಿ ಬಾಂಗ್ಲಾ ಪ್ರಜೆಗಳ ಬಂಧನ: ಬಾಂಗ್ಲಾದೇಶದಿಂದ ಬೆಂಗಳೂರಿಗೆ ಅಕ್ರಮ ಪಾಸ್​ಪೋರ್ಟ್​ ಮೂಲಕ ಬಂದಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಲಿಯಾಕತ್ ಆಲಿ ಮತ್ತು ರಿಜಾಉಲ್ ಶೇಕರ್ ಎನ್ನುವವರು ಏಪ್ರಿಲ್​ 2 ರಂದು ಸಿಂಗಾಪುರ್‌ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಬಂದಿದ್ದ ಮಾಹಿತಿ ಮೇರೆಗೆ ವಿಮಾನ ನಿಲ್ದಾಣ ಸಿಬ್ಬಂದಿ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಇಬ್ಬರು ಆರೋಪಿಗಳು ತಮ್ಮ ಹೆಸರನ್ನುಲಿಯಾಕತ್​ ಶೇಖ್​ ಮತ್ತು ರೀಗನ್​ ಶೇಖ್​ ಎಂಬ ಹೆಸರಿನಲ್ಲಿ ಭಾರತೀಯ ಅಕ್ರಮ ಪಾಸ್​ಪೋರ್ಟ್​ ಪಡೆದು ಬೆಂಗಳೂರಿಗೆ ಬಂದಿರುವುದು ತಿಳಿದ ಅಧಿಕಾರಿಗಳು ಪರಿಶೀಲನೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ವಿದೇಶಿ ಕರೆನ್ಸಿ ವಶಕ್ಕೆ:ವಿದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟಿಗಟ್ಟಲೆ ವಿದೇಶಿ ಕರೆನ್ಸಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಮೂವರು ಪ್ರಯಾಣಿಕರು ಬ್ಯಾಂಕಾಕ್​ಗೆ ಅಕ್ರಮವಾಗಿ ವಿದೇಶಿ ಹಣ ತೆಗೆದುಕೊಂಡು ಹೋಗುತ್ತಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಬ್ಯಾಗ್​ನಲ್ಲಿ ಹಣ ಇಟ್ಟುಕೊಂಡು ಸಾಗಿಸುತ್ತಿದ್ದರು. 1,41,12,961 ರೂಪಾಯಿ‌ ವಿದೇಶಿ ಹಣ ಪತ್ತೆಯಾಗಿದೆ. ಯುಎಸ್​​ಡಿ, ಯುರೋ, ಸ್ಪಿಸ್, ಪ್ರಾನ್ಸ್, ಮತ್ತು ಥಾಯ್ ಬಾಹ್ತ್​​ ಕರೆನ್ಸಿ ಇದಾಗಿದೆ. ಭದ್ರತಾ ಸಿಬ್ಬಂದಿ ಆರೋಪಿಗಳನ್ನು ಹಣದ ಸಮೇತ ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ಹೈದರಾಬಾದ್​ ವಿ. ನಿಲ್ದಾಣದಲ್ಲಿ ಕೋಟಿ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿತ್ತು:ಹೈದರಾಬಾದ್​ನ ಶಂಶಾಬಾದ್​ ವಿಮಾನ ನಿಲ್ದಾಣದಲ್ಲಿ ಕಸ್ಟಮ್​ ಅಧಿಕಾರಿಗಳು 7 ಕೋಟಿ ಮೌಲ್ಯದ ಅಕ್ರಮ ಚಿನ್ನವನ್ನು ಇದೇ ಫೆಬ್ರವರಿಯಂದು ವಶಪಡಿಸಿಕೊಂಡಿದ್ದರು. ಶಾರ್ಜಾ ಮೂಲಕ ಸುಡಾನ್​ನಿಂದ ಹೈದರಾಬಾದ್​ಗೆ ಬಂದ 23 ಪ್ರಯಾಣಿಕರನ್ನು ಅಧಿಕಾರಿಗಳು ಪರಿಶೀಲಿಸಿದಾಗ ಅಕ್ರಮ ಚಿನ್ನ ಪತ್ತೆಯಾಗಿತ್ತು. ಗುಪ್ತಚರ ಅಧಿಕಾರಿಗಳ ಮಾಹಿತಿ ಮೇರೆಗೆ ಜಿ9 458 ವಿಮಾನದಲ್ಲಿ ಕಸ್ಟಮ್​ ಅಧಿಕಾರಿಗಳು ತನಿಖೆ ನಡೆಸಿದಾಗ 14.9063 ಗ್ರಾಂ ಚಿನ್ನ ಪತ್ತೆಯಾಗಿತ್ತು. ಈ 23 ಪ್ರಯಾಣಿಕರು ಶೂ, ಟೈ ಮತ್ತು ತಮ್ಮ ಬಟ್ಟೆಗಳಲ್ಲಿ ಚಿನ್ನವನ್ನು ಅಡಗಿಸಿ ಸಾಗಿಸುತ್ತಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಪ್ರಮುಖರನ್ನು ಬಂಧಿಸಿ ಉಳಿದವರ ವಿಚಾರಣೆ ನಡೆಸಿದೆ. ಈ ಎಲ್ಲಾ ಬಂಧಿತರು ಸುಡಾನ್​ ದೇಶದವರೆಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ:ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಬಂದಿದ್ದ ಇಬ್ಬರು ಬಾಂಗ್ಲಾದೇಶ ಪ್ರಜೆಗಳ ಬಂಧನ

Last Updated : Apr 10, 2023, 5:00 PM IST

ABOUT THE AUTHOR

...view details