ಬೆಂಗಳೂರು : ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಗೊಳ್ಳುತ್ತಿದ್ದಂತೆ ಅದರ ರಾಜಕೀಯ ಲಾಭ ಪಡೆದುಕೊಳ್ಳಲು 'ಕೈ' ಪಾಳಯದಲ್ಲಿ ರಹಸ್ಯವಾಗಿ ಮಾಸ್ಟರ್ ಪ್ಲಾನ್ ಸಿದ್ಧವಾಗುತ್ತಿದೆ ಎಂದು ತಿಳಿದು ಬಂದಿದೆ.
" ಈ ಟಿವಿ ಭಾರತಕ್ಕೆ " ಲಭ್ಯವಾಗಿರುವ ಮಾಹಿತಿ ಪ್ರಕಾರ ವಿಧಾನಸಭೆ ಪ್ರತಿಪಕ್ಷ ನಾಯಕರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಇಬ್ಬರೂ ಸೇರಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನಕ್ಕೆ ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಬಿಜೆಪಿ ಪಕ್ಷದೊಳಗಿನ ಭಿನ್ನಮತ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಮತ್ತಷ್ಟು ಸ್ಫೋಟಗೊಳ್ಳಲಿದೆ. ಇದನ್ನು ಬಳಸಿಕೊಂಡು ನಮೋ ಪಾಳಯದ, ಜನತಾ ಪರಿವಾರ ಮೂಲದ ಮತ್ತು ಕಾಂಗ್ರೆಸ್ ಬಗ್ಗೆ ಒಲವು ಹೊಂದಿದ ಬಿಜೆಪಿಯ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನ ಸದ್ದು ಗದ್ದಲವಿಲ್ಲದೇ ನಡೆಯುತ್ತಿದೆ ಎಂದು ಗೊತ್ತಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆದ ಮಾದರಿಯಲ್ಲಿಯೇ "ಬಿಜೆಪಿಗೆ ರಿವರ್ಸ್ ಆಪರೇಶನ್ " ಮಾಡಲು ಕಾಂಗ್ರೆಸ್ ಪಾಳಯದಲ್ಲಿ ವೇದಿಕೆ ಸಿದ್ಧವಾಗುತ್ತಿದೆ ಎಂದು ಹೇಳಲಾಗಿದೆ.
ಮೊದಲು ಈ ಪ್ರಯತ್ನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ ಕೈ ಹಾಕಿದ್ದರೆನ್ನಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಹಾಯವಿಲ್ಲದೇ ಬಿಜೆಪಿ ಸರ್ಕಾರ ಕೆಡವಿ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ರಚಿಸುವುದು ಕಷ್ಟಕರ ಎನ್ನುವುದನ್ನು ಮನಗಂಡು ಸಿದ್ಧರಾಮಯ್ಯನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಪರೇಷನ್ ಹಸ್ತಕ್ಕೆ ಮುಂದಾಗುವುದು ಒಳ್ಳೆಯದು ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದರೆ, ಜೆಡಿಎಸ್ ನೆರವು ಸಹ ಸಿಗಲಿದೆ. ಎನ್ನುವ ವಿಶ್ವಾಸವನ್ನು ಕೈ ನಾಯಕರು ಹೊಂದಿದ್ದಾರೆ. ಬಿಜೆಪಿಯ ಅತೃಪ್ತ ಶಾಸಕರು ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸುಮಾರು ಹದಿನೈದಕ್ಕೂ ಹೆಚ್ಚಿನ ಬಿಜೆಪಿ ಅತೃಪ್ತ ಶಾಸಕರು ಕಾಂಗ್ರೆಸ್ ಮುಖಂಡರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಉಪ ಮುಖ್ಯಮಂತ್ರಿ ಮತ್ತು ಉತ್ತಮ ಖಾತೆ ದೊರೆಯದೇ ಅಸಮಾಧಾನ ಗೊಂಡಿರುವ ಆರೋಗ್ಯ ಸಚಿವ ಶ್ರೀರಾಮಲು ಅವರನ್ನು ವಿಶ್ವಾಸಕ್ಕೆ ತಗೆದುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಪತನಕ್ಕೆ ಪ್ರತಿಪಕ್ಷಗಳ ಪಾಳಯದಿಂದ ಮುಹೂರ್ತ ನಿಗದಿಪಡಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.