ನೆಲಮಂಗಲ:ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್ ನಿಷೇಧ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ಪೆಟ್ರೋಲಿಯಂ ಸಚಿವ ಡಿ.ವಿ ಸದಾನಂದಗೌಡ ತಿಳಿಸಿದ್ದಾರೆ.
ನೆಲಮಂಗಲದ ತುಮಕೂರು ರಸ್ತೆಯ ಮಾದಾವಾರ ಬಳಿಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಐಪ್ಲೆಕ್- 2019, ದಕ್ಷಿಣಭಾರತದ ಅತಿದೊಡ್ಡ 10ನೇ ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ವಸ್ತುಪ್ತದರ್ಶನದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಟ್ಟು ಪ್ಲಾಸ್ಟಿಕ್ ಬಳಕೆಯನ್ನು ಕೇವಲ 5% ಇಳಿಸಿ, ಒಮ್ಮೆ ಬಳಸುವ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಪ್ರಧಾನಿ ನರೇಂದ್ರ ಮೋದಿ ಗಂಭೀರ ಚಿಂತನೆ ನಡೆಸಿದ್ದಾರೆ. ಈ ಸಂಬಂಧ ಗಾಂಧಿ ಜಯಂತಿಯಂದು ಈ ಮಹತ್ಕಾರ್ಯಕ್ಕೆ ದೇಶದ್ಯಾಂತ ಚಾಲನೆ ಸಿಗಲಿದೆ. ಭೂಮಿ, ಅಂತರ್ಜಲ, ಗಾಳಿ ಸೇರಿದಂತೆ ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆಗೆ ದಿಟ್ಟ ಹೆಜ್ಜೆ ಇಡಲಿದ್ದೇವೆ. ಬಹು ಉಪಯೋಗಿ ಪಾಲಿಮರ್ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.