ಲೋಕಾಯುಕ್ತ ದಾಳಿ ಬಗ್ಗೆ ಆರಗ ಜ್ಞಾನೇಂದ್ರ ಹೇಳಿಕೆ ದೊಡ್ಡಬಳ್ಳಾಪುರ: ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲಂಚ ಸ್ವೀಕಾರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣದಿಂದ ಪಕ್ಷಕ್ಕೆ ಪರಿಣಾಮ ಬೀರುವುದಿಲ್ಲ ಎಂದು ಪ್ರಕರಣದ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಅನಿರೀಕ್ಷಿತವಾಗಿ ನಗರದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿ, ಲಂಚ ಸ್ವೀಕರಿಸುತ್ತಿದ್ದ ವೇಳೆ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆ. ಲೋಕಾಯುಕ್ತ ಅಧಿಕಾರಿಗಳು ದಾಳಿ ವೇಳೆ ಸಿಕ್ಕ ಹಣ ಕಾನೂನು ಬಾಹಿರವಾಗಿದ್ದರೇ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಿರೂಪಾಕ್ಷಪ್ಪ ಪುತ್ರ ಲಂಚ ಸ್ವೀಕಾರ ವಿಚಾರ ತಿಳಿಯುತ್ತಿದ್ದಂತೆ ಶಾಸಕ ವಿರೂಪಾಕ್ಷಪ್ಪ ಈಗಾಗ್ಲೇ ನೈತಿಕ ಹೊಣೆಹೊತ್ತು ಕೆ.ಎಸ್.ಡಿ.ಎಲ್ ಗೆ ರಾಜಿನಾಮೆ ನೀಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಪಾರದರ್ಶಕ ತನಿಖೆ ನಡೆಯಲಿದೆ ಎಂದಿದ್ದಾರೆ ಎಂದರು.
ಲೋಕಾಯುಕ್ತ ಕತ್ತು ಹಿಸುಕಿದ್ದ ಕಾಂಗ್ರೆಸ್ ಪಕ್ಷ :ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಲೋಕಾಯುಕ್ತವನ್ನು ಕುತ್ತಿಗೆ ಹಿಸುಕಿ ಕುಳಿತಿದ್ದರು. ಆಗ ಲೋಕಾಯುಕ್ತ ಇದ್ದಿದ್ದರೇ ಕಾಂಗ್ರೆಸ್ನ ಹಲವು ಪ್ರಮುಖರು ಇಂದು ಜೈಲಿನಲ್ಲಿರಬೇಕಿತ್ತು. ನಾವು ಇಂದು ಲೋಕಾಯುಕ್ತಕ್ಕೆ ಸಂಪೂರ್ಣ ಶಕ್ತಿ ನೀಡಿದ್ದೇವೆ. ಹೀಗಾಗಿ ರೈಡ್ಗಳು ನಡೆಯುತ್ತಿದೆ ಇದಕ್ಕೆ ಬಿಜೆಪಿ, ಕಾಂಗ್ರೆಸ್ ಎಂಬ ವ್ಯತ್ಯಾಸವಿಲ್ಲ. ಇದಕ್ಕೂ ಮೊದಲು ಕಾಂಗ್ರೆಸ್ ಮುಖಂಡರ ಮನೆ ಮತ್ತು ಕಚೇರಿಗಳಲ್ಲಿ ಕಂತೆ ಕಂತೆ ದುಡ್ಡು ಸಿಕ್ಕಿರುವ ಉದಾಹರಣೆಗಳಿವೆ. ಇಷ್ಟೆಲ್ಲ ಆಗಿದ್ದರೂ ಕಾಂಗ್ರೆಸ್ನವರು ಯಾವ ನೈತಿಕತೆ ಇಟ್ಟುಕೊಂಡು ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.
ಐಎಎಸ್ ಮತ್ತು ಐಪಿಎಸ್ ಕಿತ್ತಾಟ:ಐಎಎಸ್ ಅಧಿಕಾರಿ ರೋಹಿಣಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಇಬ್ಬರ ಜಗಳದಿಂದ ಸರ್ಕಾರಕ್ಕೆ ಮುಜುಗರ ಉಂಟಾಗುತ್ತಿದ್ದು, ಇಬ್ಬರಿಗೂ ಎರಡುಮೂರು ಬಾರಿ ಎಚ್ಚರಿಕೆ ನೀಡಿದ್ದರೂ ಹಾಗೇ ಮುಂದುವರೆಸಿದ್ದಾರೆ, ಇವರ ವಿರುದ್ದ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳಿಂದ ಮೋಸ :ಬಳಿಕಸೈಬರ್ ಕ್ರೈ ಪ್ರಕರಣಗಳ ಹೆಚ್ಚಳ ಬಗ್ಗೆ ಮಅತನಾಡಿದ ಅವರು, ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸೈಬರ್ ಕ್ರೈಂ ವಿಭಾಗವನ್ನು ಗಟ್ಟಿಗೊಳಿಸಿದ್ದೇವೆ. ಸಾರ್ವಜನಿಕರು ಕೂಡ ಇದಕ್ಕೆ ಸಹಕರಿಸಬೇಕಾಗುತ್ತದೆ. ಸೈಬರ್ ವಂಚನೆಗೊಳಗಾದ (ಗೋಲ್ಡನ್ ಹವರ್) ಎರಡು ಗಂಟೆಗಳ ಒಳಗೆ 112ಗೆ ಕರೆ ಮಾಡಿ ವಿವರ ನೀಡಿದರೆ ಅಕೌಂಟ್ ಫ್ರೀಜ್ ಮಾಡಲಾಗುವುದು. ಇದರಿಂದ ಅನಾಹುತ ತಡೆಯಲು ಸಹಕಾರಿಯಾಗಲಿದೆ. ಈ ಕುರಿತು ಜನಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಎಲ್ಲಾ ರೀತಿಯಿಂದಲೂ ಕ್ರಮ ಕೈಗೊಳ್ಳುತ್ತಿದೆ ಎಂದರು. ಇಡೀ ಭಾರತದಲ್ಲೇ ಕರ್ನಾಟಕ ಸೈಬರ್ ಪೊಲೀಸ್ ವಿಭಾಗ ಅಗ್ರ ಸ್ಥಾನದಲ್ಲಿದೆ. ಇದಕ್ಕಾಗಿ ಸಿಐಡಿ ಇಲಾಖೆಯ ಕಟ್ಟಡದಲ್ಲಿ ಒಂದು ಕಟ್ಟಡವನ್ನೆ ಸಕಲ ಸಲಕರಣೆಗಳೊಂದಿಗೆ ಸಿದ್ದಗೊಳಿಸಲಾಗಿದೆ. ಬೇರೆ ಬೇರೆ ರಾಜ್ಯದ ತಂಡಗಳು ಬಂದು ಇಲ್ಲಿ ಅಧ್ಯಯನ ಮಾಡುವಷ್ಟು ಅಭಿವೃದ್ದಿ ಮಾಡಲಾಗಿದೆ ಎಂದು ತಿಳಿಸಿದರು.
ದೊಡ್ಡಬಳ್ಳಾಪುರ ಜೋಡಿ ಕೊಲೆ ಬಗ್ಗೆ ಪ್ರತಿಕ್ರಿಯೆ :ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲದಲ್ಲಿ ಇತ್ತೀಚೆಗೆ ಜೋಡಿ ಕೊಲೆ ಸಂಭವಿಸಿದ್ದು, ಕೊಲೆಗೂ ಮುನ್ನ ಆರೋಪಿಗಳು ದೂರು ನೀಡಲು ಬಂದಾಗ ಪೊಲೀಸ್ ಅಧಿಕಾರಿಗಳು ನಿರಾಕರಿಸುತ್ತಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಎರಡು ಹತ್ಯೆಗಳಾದವು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣ ಸದ್ಯ ವಿಚಾರಣೆ ಹಂತದಲ್ಲಿದೆ. ಅಧಿಕಾರಿಗಳದ್ದು ಏನು ತಪ್ಪಿದೆ ಮತ್ತು ಈ ಪ್ರಕರಣ ಯಾತಕ್ಕಾಗಿ ಆಗಿದೆ ಎಂಬುದನ್ನು ತನಿಖೆ ನಂತರ ತಿಳಿಯಲಿದೆ. ಈ ಪ್ರಕರಣದಲ್ಲಿ ಪೊಲೀಸರ ಕೈವಾಡವೇನಾದರೂ ಇದ್ದರೆ ಅವರ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲೂಕಿನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ: ಕಾಂಗ್ರೆಸ್ ಕಾಲದಲ್ಲಿ 35 ಸಾವಿರ ಪೊಲೀಸ್ ಸಿಬ್ಬಂದಿ ಹುದ್ದೆ ಖಾಲಿ ಇತ್ತು ಅದನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಉಳಿದ 12 ಸಾವಿರ ಕಾನ್ಸ್ಟೆಬಲ್ ಹುದ್ದೆಗಳು ಭರ್ತಿ ಮಾಡಲಿದ್ದೇವೆ. ಸಬ್ ಇನ್ಸ್ಪೆಕ್ಟರ್ ಹಗರಣ ನಡೆಯದೇ ಇದ್ದಿದ್ದರೆ ಇಷ್ಟೊತ್ತಿಗೆ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿ ತಾಲೂಕಿನ ಸಿಬ್ಬಂದಿ ಕೊರತೆ ನೀಗುತ್ತಿತ್ತು ಎಂದರು ತಾಲೂಕಿನಲ್ಲಿ ಆದಷ್ಟು ಬೇಗ ಜನಸಂಖ್ಯೆ ಮತ್ತು ಏರಿಯಾದ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿ ಹೆಚ್ಚಿಗೆ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿದೆ ಎಂದರು.
ಇದನ್ನೂ ಓದಿ:ಶಾಸಕನ ಪುತ್ರನ ಮನೆ ಮೇಲೆ ದಾಳಿ: ಇದೊಂದು ಸಣ್ಣ ರೇಡ್, ಲೋಕಾಕ್ಕೆ ಬಲ ತುಂಬಿದ್ದೇ ನಾವು : ಸಿಸಿ ಪಾಟೀಲ್