ನೆಲಮಂಗಲ: ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆ ಬರಗೂರು ಕಾಲೋನಿ ಸಂಪರ್ಕ ಕಡಿತಗೊಂಡಿದೆ. ನೀರಿನ ರಭಸಕ್ಕೆ ಹೆದರಿ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದು, ನಿತ್ಯ ಜೀವದ ಹಂಗು ತೊರೆದು ಹಳ್ಳ ದಾಟಿ ಹಾಲು ಉತ್ಪಾದಕರು ಡೈರಿಗೆ ಹಾಲು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಹೌದು, ನೆಲಮಂಗಲ ತಾಲೂಕಿನ ಗಡಿ ಭಾಗದ ಗ್ರಾಮ ಬರಗೂರು. ಸುಮಾರು 60 ವರ್ಷಗಳ ಹಿಂದೆ 2 ಕಿ.ಮೀ ದೂರದಲ್ಲಿ ಬರಗೂರು ಕಾಲೋನಿ ನಿರ್ಮಾಣ ಮಾಡಿದ ಸರ್ಕಾರ, ಬಡವರಿಗೆ ನಿವೇಶನ ನೀಡಿದೆ. ಬರಗೂರು ಕಾಲೋನಿ ಸೇರಿದಂತೆ ಇಲ್ಲಿ ಮುತ್ತರಾಯಪ್ಪನ ಪಾಳ್ಯ, ಗೋವಿಂದನ ಪಾಳ್ಯ ಮತ್ತು ಚಲ್ಲಳ ಸಹ ಇವೆ. ನಾಲ್ಕು ಕಾಲೋನಿಗಳಿಂದ ಒಟ್ಟು 70 ಕ್ಕೂ ಹೆಚ್ಚು ಕುಟುಂಬಗಳು ಇದ್ದು, 300 ಕ್ಕೂ ಹೆಚ್ಚು ಜನರಿದ್ದಾರೆ.
70 ಕುಟುಂಬಗಳು ಬರಗೂರು ಗ್ರಾಮದೊಂದಿಗೆ ನಿಕಟ ಸಂಪರ್ಕ ಹೊಂದಿವೆ. ಮಕ್ಕಳು ಶಾಲೆಗೆ ಹೋಗುವುದು, ದಿನಸಿ ಪದಾರ್ಥ ಖರೀದಿ, ಹಾಲಿನ ಡೈರಿ, ಪಶು ಆಸ್ಪತ್ರೆ ಹೀಗೆ ದಿನ ನಿತ್ಯದ ಕಾರ್ಯಗಳಿಗೆ ಬರಗೂರು ಗ್ರಾಮಕ್ಕೆ ಬರಬೇಕು. ಆದರೆ, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬರಗೂರು ಕಾಲೋನಿ ಜನ ಸೇರಿದಂತೆ 70 ಕುಟುಂಬಗಳು ಬರಗೂರು ಗ್ರಾಮದಿಂದ ಸಂಪರ್ಕ ಕಳೆದುಕೊಂಡಿವೆ. ಬರಗೂರು ಮತ್ತು ಬರಗೂರು ಕಾಲೋನಿ ನಡುವೆ ದೊಡ್ಡಹಳ್ಳ ತುಂಬಿ ಹರಿಯುತ್ತಿದೆ. ಮಳೆ ಬಂದಾಗ ಸುಮಾರು 10 ಅಡಿ ಎತ್ತರದಲ್ಲಿ ನೀರು ಹರಿಯುತ್ತದೆ. ನೀರಿನ ರಭಸಕ್ಕೆ ಹೆದರಿ ಹಳ್ಳ ದಾಟುವ ಸಾಹಸಕ್ಕೆ ಯಾರೂ ಮುಂದಾಗುತ್ತಿಲ್ಲ.
ಇದನ್ನೂ ಓದಿ:ಮುಳುಗಿದ ಸೇತುವೆ ಮೇಲೆ ವಿದ್ಯಾರ್ಥಿನಿಯರು, ವಾಹನ ಸವಾರರ ಸಂಚಾರ.. ಅಪಾಯಕ್ಕೆ ಆಹ್ವಾನ