ನವದೆಹಲಿ/ಬೆಂಗಳೂರು: ಕೋಟ್ಯಾಂತರ ಭಾರತೀಯರು ಕಾತರದಿಂದ ಎದುರು ನೋಡುತ್ತಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಭೂಮಿ ಪೂಜೆಯ ಶಿಲಾನ್ಯಾಸ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ದಿನವನ್ನು ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾಗುತ್ತದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ದೆಹಲಿಯ ತಮ್ಮ ನಿವಾಸದಲ್ಲಿ ಸದಾನಂದಗೌಡ ಅವರು ಮಂದಿರ ಭೂಮಿ ಪೂಜೆ ವೇಳೆ ಶ್ರೀರಾಮನ ಪೂಜೆ ನೆರವೇರಿಸಿದರು. ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಶ್ರಯದಲ್ಲಿ ಅಯೋಧ್ಯೆಯಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಸರಸಂಘ ಚಾಲಕ ಡಾ. ಮೋಹನ್ ಭಾಗ್ವತ್, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ದೇಶದ ನಾನಾ ಭಾಗದಿಂದ ಬಂದಿದ್ದ ಸಂತರು ಈ ಶುಭ ಘಳಿಗೆ ಸಾಕ್ಷಿಯಾದರು. ಇದಕ್ಕೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ಶ್ರೀರಾಮನ ಪೂಜೆ ನೆರವೇರಿಸಿದ ಸದಾನಂದ ಗೌಡ ಈ ದಿನ ಸುಲಭವಾಗಿ ಬಂದಿಲ್ಲ. ಶ್ರೀರಾಮ ಮಂದಿರ ಪುನರ್ ನಿರ್ಮಾಣಕ್ಕೆ ಐದು ಶತಮಾನಗಳಿಂದ ನಡೆದಿರುವ ಹೋರಾಟದಲ್ಲಿ ಅದೆಷ್ಟೋ ಭಾರತೀಯರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ. 20ನೇ ಶತಮಾನದ ಕೊನೆಯ ದಶಕದಲ್ಲಿ ಅಯೋಧ್ಯೆ ಅಂದೋಲನ ಉತ್ತುಂಗಕ್ಕೆ ಏರಿತ್ತು. ವಿಶ್ವ ಹಿಂದೂ ಪರಿಷತ್ತಿನ ಅಂದಿನ ಅಧ್ಯಕ್ಷ ಅಶೋಕ್ ಸಿಂಘಾಲ್, ಬಿಜೆಪಿ ನಾಯಕ ಎಲ್ ಕೆ ಅಡ್ವಾನಿ ಅಂತಹ ಸಂಘ ಪರಿವಾರದ ಹಿರಿಯ ಧುರೀಣರು ಆಂದೋಲವನ್ನು ಮುನ್ನಡೆಸಿದ್ದಾರೆ ಎಂದರು.
ಸಂಘಪರಿವಾರದ ಭಾಗವಾಗಿ ನಾವೆಲ್ಲ ಈ ಆಂದೋಲನದಲ್ಲಿ ಪಾಲ್ಗೊಂಡಿದ್ದೆವು. ದೇಶದ ವಿವಿಧ ಭಾಗಗಳಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಅಯೋಧ್ಯೆ ಆಂದೋಲನ ಕಾವೇರಿತ್ತು. ನಾನು ಆವಾಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷನಾಗಿದ್ದೆ. 1992ರ ಡಿಸೆಂಬರ್ ಮೊದಲ ವಾರದಲ್ಲಿ ಪುತ್ತೂರಿನಿಂದ ನೂರಕ್ಕೂ ಹೆಚ್ಚು ಕರಸೇವಕರು ಅಯೋಧ್ಯೆಯೆಡೆಗೆ ಪಯಣ ಬೆಳಸಿದ್ದೆವು. ಇದುವರೆಗಿನ ಅಯೋಧ್ಯೆ ಸಂಘರ್ಷದಲ್ಲಿ ಸಾಧು-ಸಂತರು ಸೇರಿದಂತೆ ಸಾವಿರಾರು ದೇಶಭಕ್ತ ಭಾರತೀಯರು ಬಲಿಯಾಗಿದ್ದಾರೆ ಅವರ ತ್ಯಾಗ ಬಲಿದಾನವನ್ನು ನಾವಿಂದು ಸ್ಮರಿಸಬೇಕು ಎಂದರು.
ಇದು ಬರೀ ಮಂದಿರಕ್ಕಾಗಿ ನಡೆದ ಆಂದೋಲನವಾಗದೆ ಭಾರತೀಯ ಭವ್ಯ ಪರಂಪರೆ, ಶ್ರೀಮಂತ ಸಂಸ್ಕೃತಿ, ಸ್ವಾಭಿಮಾನ ಮರು ಸ್ಥಾಪನೆಗಾಗಿ ನಡೆದ ಸೈದ್ಧಾಂತಿಕ ಸಂಘರ್ಷವಾಗಿತ್ತು. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಶ್ಚಂದ್ರ ಬೋಸ್ ಮುಂತಾದವರ ನೇತೃತ್ವದಲ್ಲಿ ದೇಶದ ರಾಜಕೀಯ ಸ್ವಾತಂತ್ರ್ಯ ಚಳುವಳಿ ನಡೆದಿದ್ದರೇ ಈ ಬಳಿಕ ಸಂಘಪರಿವಾರ ನೇತೃತ್ವದಲ್ಲಿ ಭಾರತೀಯ ಅಸ್ಮಿತೆ, ಸಾಂಸ್ಕೃತಿಕ ಸ್ವಾತಂತ್ರ್ಯಕ್ಕಾಗಿ ಆಂದೋಲನ ನಡೆಯಿತು ಎಂದರು.