ನೆಲಮಂಗಲ: ಮದುವೆಯಾಗಿ 3 ವರ್ಷದ ಗಂಡು ಮಗು ಇದ್ದರೂ ಆಕೆಗೆ ತಾನು ಕೆಲಸ ಮಾಡುತ್ತಿರುವ ಬಾಸ್ ಜೊತೆ ಲವ್ ಆಗಿತ್ತು. ಹೆಂಡತಿಯ ಅನೈತಿಕ ಸಂಬಂಧ ಪ್ರಶ್ನಿಸಿದ ಗಂಡ, ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದುಕೊಂಡು ಕೊಲೆಗೆ ಪ್ರಿಯಕರನ ಜೊತೆ ಸೇರಿ ಸುಪಾರಿ ಕೊಟ್ಟಿದ್ದ ಐನಾತಿ ಹೆಂಡತಿ ಸೇರಿ 6 ಜನರನ್ನು ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅರಿಶಿನಕುಂಟೆಯ ಆದರ್ಶನಗರ ನಿವಾಸಿ ಗಿರೀಶ್ ಮೇಲೆ ಕೊಲೆ ಯತ್ನವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಪ್ರಿಯಕರ ಕಲ್ಲೇಶ್ ಜೈನ್ ಸೇರಿದಂತೆ ಆತನ ಸಹಚರರಾದ ಕಾರು ಚಾಲಕ ಪ್ರಭು, ತ್ಯಾಮಗೊಂಡ್ಲು ಬಳಿಯ ನರಸಾಪುರದ ನಿವಾಸಿಗಳಾದ ಗೋಪಾಲಯ್ಯ, ಶಶಿಕುಮಾರ್, ನಾಗರಾಜು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಪತಿ ಗಿರೀಶ್ ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದಾರೆ.
ಘಟನೆ ವಿವರ:ಗಿರೀಶ್ ಹಾಗೂ ಚೈತ್ರಾ 2015ರಲ್ಲಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಸದ್ಯ ಇವರಿಗೆ ಮೂರು ವರ್ಷದ ಗಂಡು ಮಗುವಿದ್ದು, ಗಿರೀಶ್ ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರು ಸಮೀಪ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಚೈತ್ರ ನೆಲಮಂಗಲದ ದಾನೋಜಿಪಾಳ್ಯ ಬಳಿಯ ಲಾರಿ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದಳು.
ಆರೋಪಿ ಚೈತ್ರ ಕಳೆದ ಮೇ 9ರ ಭಾನುವಾರ ಕೆಲಸಕ್ಕೆ ರಜೆ ಇದ್ದರೂ ಕೂಡ ಕೆಲಸಕ್ಕೆ ಹೋಗಿದ್ದಳು. ಇದನ್ನು ಪ್ರಶ್ನಿಸಿದ ಗಂಡನಿಗೆ ಸರಿಯಾದ ಉತ್ತರ ನೀಡಿರಲಿಲ್ಲ. ಇದರಿಂದ ಅನುಮಾನಗೊಂಡ ಗಿರೀಶ್ ಚೈತ್ರಾಳ ಮೊಬೈಲ್ ಪರಿಶೀಲಿಸಿದಾಗ, ಚೈತ್ರ ಕೆಲಸ ಮಾಡುತ್ತಿದ್ದ ಶೋ ರೂಂ ಮಾಲೀಕ ಕಲ್ಲೇಶ್ ಜೈನ್ ಜೊತೆಗಿನ ಲವ್ವಿ ಡವ್ವಿ ಗೋತ್ತಾಗಿತ್ತು. ಮೊಬೈಲ್ನಲ್ಲಿ ಫೋಟೋ ಹಾಗೂ ಅಶ್ಲೀಲ ಮೆಸೇಜ್ಗಳನ್ನು ನೋಡಿ ಗಿರೀಶ್ ಕೋಪಗೊಂಡು ಪತ್ನಿಗೆ ಎಚ್ಚರಿಕೆ ಸಹ ನೀಡಿದ್ದ.