ದೇವನಹಳ್ಳಿ:ಬೆಂಗಳೂರು-ಯಲಹಂಕದ-ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ ನಗರಕ್ಕೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳು ರಾಷ್ಟ್ರೀಯ ಹೆದ್ದಾರಿ 7ರಲ್ಲಿನ ಫ್ಲೈ ಓವರ್ ಇಳಿಯದೆ, ನಿಲುಗಡೆ ಸ್ಥಳದಿಂದ ದೂರದಲ್ಲಿ ನಿಲುಗಡೆ ಮಾಡುತ್ತಿವೆ. ಜತೆಗೆ ಪ್ರಯಾಣಿಕರ ನಿಲುಗಡೆ ಸ್ಥಳಕ್ಕೆ ಟಿಕೆಟ್ ಕೊಡುವ ಬದಲಿಗೆ ಚಿಕ್ಕಬಳ್ಳಾಪುರಕ್ಕೆ ಟಿಕೆಟ್ ಕೊಟ್ಟು ಪ್ರಯಾಣಿಕರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ.
ಪ್ರಯಾಣಿಕ ಸದಾಶಿವ ಎಂಬುವರು ಈ ಬಗ್ಗೆ ವಿಡಿಯೋ ಮಾಡಿ, ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಬರುವ ಬಸ್ಗಳು ನಾಗಾರ್ಜುನ ಕಾಲೇಜು ಮತ್ತು ನಂದಿಕ್ರಾಸ್ ಬಳಿ ನಿಲುಗಡೆ ಕೊಡಬೇಕು. ಈ ನಿಲುಗಡೆ ಸ್ಥಳಗಳಲ್ಲಿ ಫ್ಲೈ ಓವರ್ ಇರುವುದರಿಂದ ಬಸ್ಗಳು ಫ್ಲೈ ಓವರ್ ಇಳಿದು ಸರ್ವಿಸ್ ರಸ್ತೆಗೆ ಬಂದು ನಿಲುಗಡೆ ಕೊಡಬೇಕು. ಆದರೆ ಈ ಬಸ್ಗಳು ಫ್ಲೈ ಓವರ್ ಮೇಲೆ ಹೋಗಿ ದೂರದಲ್ಲಿ ನಿಲುಗಡೆ ಕೊಡುತ್ತಿದೆ. ಇದರಿಂದ ಪ್ರಯಾಣಿಕರು ರಾತ್ರಿ ವೇಳೆ ದೂರದಿಂದ ಬಸ್ ಇಳಿದು ನಡೆದುಕೊಂಡು ಬರಬೇಕಾದ ಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು.
ಸದಾಶಿವ ಅವರು ನಿನ್ನೆ ರಾತ್ರಿ ದೇವನಹಳ್ಳಿ ಬಳಿ ಕೆಎಸ್ಆರ್ಟಿಸಿ ಬಸ್ ಹತ್ತಿದ್ದು, ನಂದಿ ಕ್ರಾಸ್ನಲ್ಲಿ ಇಳಿಯಬೇಕಿತ್ತು. ದೇವನಹಳ್ಳಿಯಿಂದ ನಂದಿ ಕ್ರಾಸ್ಗೆ 17 ರೂ.ಟಿಕೆಟ್ ದರ ಇದೆ. ಆದರೆ ಬಸ್ ಬಸ್ ಕಂಡಕ್ಟರ್ ನಂದಿಕ್ರಾಸ್ಗೆ ಟಿಕೆಟ್ ಕೊಡುವ ಬದಲಿಗೆ ಚಿಕ್ಕಬಳ್ಳಾಪುರಕ್ಕೆ ಇರುವ 28 ರೂ.ಟಿಕೆಟ್ ಕೊಟ್ಟಿದ್ದಾರೆ. ಹೆಚ್ಚುವರಿಯಾಗಿ 11 ರೂ.ಸುಲಿಗೆ ಮಾಡಿದ್ದಲ್ಲದೇ, ನಿಲುಗಡೆ ಸ್ಥಳದಿಂದ ದೂರದಲ್ಲಿ ನಿಲುಗಡೆ ಮಾಡಿದ್ದಾರೆ ಎಂದು ದೂರಿದ್ದಾರೆ.