ಬಾಗಲಕೋಟೆ: ತೋಟಗಾರಿಕೆಯಲ್ಲಿ ಉತ್ಪಾದಕತೆ ಹೆಚ್ಚಿಸಲು, ಗುಣಮಟ್ಟವನ್ನು ಸುಧಾರಿಸಲು ಮತ್ತು ತೋಟಗಾರಿಕೆ ಕ್ಷೇತ್ರದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಉನ್ನತ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಮುಖವಾಗಿದೆ ಎಂದು ಭಾರತ ಸರ್ಕಾರದ ನ್ಯಾಷನಲ್ ಇನ್‍ಸ್ಟಿಟ್ಯೂಷನ್ ಫಾರ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ ಆಯೋಗದ ಸದಸ್ಯ ಪ್ರೊ. ರಮೇಶ ಚಂದ್ ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿಂದು ವಿವಿಯ 9ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ರೈತರು ತಮ್ಮ ಉತ್ಪನ್ನಗಳನ್ನು ರಾಜ್ಯ ಮತ್ತು ದೇಶದಾದ್ಯಂತ ಉತ್ತಮ ಆದಾಯ ಗಳಿಸುವಂತೆ ವ್ಯಾಪಾರ ಮಾಡಲು ಅನುಕೂಲವಾಗುವಂತೆ ವಿದ್ಯಾಲಯದಲ್ಲಿ ತೋಟ, ವ್ಯಾಪಾರ ಮತ್ತು ರಫ್ತು ಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿರುವುದು ಶ್ಲಾಘನೀಯ ಎಂದರು.
ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮತ್ತು ರಾಜ್ಯಕ್ಕೆ ತೋಟಗಾರಿಕೆ ಬೆಳೆಗಳನ್ನು ಬೆಳೆಸುವ ನಿಟ್ಟಿನಲ್ಲಿ ದೊಡ್ಡ ಆಸ್ತಿ ಆಗಿದ್ದಾರೆ. ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪಡೆದ ಜ್ಞಾನ ಮತ್ತು ಕೌಶಲ್ಯದಿಂದ ಸಾರ್ವಜನಿಕ ಅಥವಾ ಖಾಸಗಿ ವಲಯದಲ್ಲಿ ತಮ್ಮದೇ ಆದ ಉದ್ಯಮ ಪ್ರಾರಂಭಿಸುವ ಅವಕಾಶಗಳು ಸಾಕಷ್ಟು ಇರುವುದಾಗಿ ತಿಳಿಸಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಂ.ಇಂದಿರೇಶ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಯುವಜನಾಂಗದ ಶೈಕ್ಷಣಿಕ ಯಶಸ್ಸಿನ ಮೇಲೆ ಬೆಳಕು ಬೀರುವ ಸುಸಂದರ್ಭ ಈ ಘಟಿಕೋತ್ಸವವಾಗಿದೆ. ವೃತ್ತಿ ಬದುಕಿನ ಭದ್ರ ಬುನಾದಿಗೆ ದಾರಿಯಾಗಿದೆ. ಬಾಗಲಕೋಟೆ ತೋ.ವಿ.ವಿ.ಯು ದೇಶದಲ್ಲಿರುವ 74 ಕೃಷಿ ವಿಶ್ವವಿದ್ಯಾಲಯಗಳಲ್ಲಿಯೇ ವಿಶಿಷ್ಟವಾದ ಮೂರನೇ ತೋಟಗಾರಿಕೆ ವಿಶ್ವವಿದ್ಯಾಲಯವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬೆಂಬಲ ಹಾಗೂ ವಿಶ್ವವಿದ್ಯಾಲಯದ ಶಿಕ್ಷಕರು, ವಿಜ್ಞಾನಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪರಿಶ್ರಮದ ಪ್ರತೀಕವಾಗಿದೆ ಎಂದರು.
ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಚಿವರು ಹಾಗೂ ತೋವಿವಿಯ ಸಹ ಕುಲಪತಿ ಕೆ.ಸಿ.ನಾರಾಯಣ ಗೌಡ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.