ದೊಡ್ಡಬಳ್ಳಾಪುರ :ಬಿಹಾರದ ಪಾಟ್ನಾದಲ್ಲಿ ನಡೆಯುವ ನ್ಯಾಷನಲ್ ಇಂಟರ್ ಡಿಸ್ಟ್ರಿಕ್ಟ್ ಜೂನಿಯರ್ ಅಥ್ಲೆಟಿಕ್ ಮೀಟ್ 2023ರ (NIDJAM) ಕ್ರೀಡಾಕೂಟಕ್ಕೆ ದೊಡ್ಡಬಳ್ಳಾಪುರದ 8 ಕ್ರೀಡಾಪಟುಗಳು ಆಯ್ಕೆಯಾಗುವ ಮೂಲಕ ಹೊಸ ಭರವಸೆ ಮೂಡಿಸಿದ್ದು, ಸರ್ಕಾರ ಮತ್ತು ಸಂಘ ಸಂಸ್ಥೆಗಳ ಪ್ರೋತ್ಸಾಹದ ಕೊರತೆಯ ನಡುವೆಯೂ ಸಾಧನೆಯ ಹಾದಿಯಲ್ಲಿದ್ದಾರೆ.
ಫೆಬ್ರವರಿ 10 ರಿಂದ 12ರವರೆಗೆ ಮೂರು ದಿನ ಕ್ರೀಡಾಕೂಟ ನಡೆಯಲಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗೆಲ್ಲುವ ಮೂಲಕ ಇದೀಗ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಇವರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಗ್ರಾಮೀಣ ಮತ್ತು ಕೂಲಿ ಕಾರ್ಮಿಕ ಕುಟುಂಬಗಳ ಹಿನ್ನೆಲೆಯಿಂದ ಬಂದಿರುವ ಇವರು ಕ್ರೀಡೆಯಲ್ಲಿ ಸಾಧನೆಯ ಕನಸು ಕಾಣುತ್ತಿದ್ದಾರೆ.
ತನುಶ್ರೀ ಅವರು ಟ್ರಯಥ್ಲಾನ್ ವಿಭಾಗದಲ್ಲಿ, ರಾಹುಲ್ ಕೆ ಮತ್ತು ಸಿಂಚನಾ ಹೆಕ್ಸಾಥ್ಲಾನ್ ವಿಭಾಗದಲ್ಲಿ, ನಿತೀನ್ ಗೌಡ ಎಂ ಮತ್ತು ದಿವ್ಯಾ ವಿ 600 ಮೀಟರ್ಸ್ ಓಟದಲ್ಲಿ ಕಿಶನ್ ಚಂದ್ರ ಮತ್ತು ರುಚಿತಾ ಆರ್ ಜಾವಲಿನ್ ಥ್ರೋ ವಿಭಾಗದಲ್ಲಿ, ಚೇತನ್ 1600 ಮೀಟರ್ಸ್ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೋಚ್ ಹೆಚ್.ಎನ್.ಆನಂದ್ ಕುಮಾರ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಉತ್ತರ ಭಾರತದಲ್ಲಿ ಚಳಿ ಕ್ರೀಡಾಪಟುಗಳಿಗೆ ದೊಡ್ಡ ಸವಾಲು. ಚಳಿ ಎದುರಿಸಲು ಇವರು ಬೆಳಗ್ಗೆ 5 ಗಂಟೆಯಿಂದಲೇ ತರಬೇತಿ ನಡೆಸುತ್ತಿದ್ದಾರೆ.