ಹೊಸಕೋಟೆ / ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗುಳ್ಳಹಳ್ಳಿ ಗ್ರಾಮದ ಸರ್ವೆ ನಂಬರ್ 1 ಮತ್ತು ದೊಡ್ಡಹರಳಗೆರೆ ಗ್ರಾಮದ ಸರ್ವೆ ನಂಬರ್ 45ರಲ್ಲಿ ಒತ್ತುವರಿಯಾಗಿದ್ದ ಸುಮಾರು 16 ಎಕರೆ ಜಮೀನನ್ನು ಅರಣ್ಯ ಇಲಾಖೆ ಹೊಸಕೋಟೆ ವಿಭಾಗದ ರೇಂಜ್ ಆಧಿಕಾರಿ ವರುಣ್ ನೇತೃತ್ವದಲ್ಲಿ ತೆರವುಗೊಳಿಸಿ ವಶಕ್ಕೆ ಪಡೆಯಲಾಯಿತು.
ಹೊಸಕೋಟೆ ತಾಲೂಕಿನ ಸುಲಿಬೆಲೆ ಸಮೀಪದ ಗುಳ್ಳಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಸುಮಾರು 50 ವರ್ಷಗಳಿಂದ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದ ಮನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು 4 ಜೆಸಿಬಿ ಯಂತ್ರಗಳ ಮೂಲಕ ತೆರವು ಮಾಡಿಸಿದರು. ಸುದ್ದು ಆಳ ಎಂಬ ಗ್ರಾಮಕ್ಕೆ ಸೇರಿದ ಪ್ರದೇಶದಲ್ಲಿ ಸರ್ಕಾರಿ ಗೋಮಾಳ ಜಮೀನಿನಲ್ಲಿ ಸುಮಾರು 50 ವರ್ಷಗಳಿಂದಲೂ ಕೆಲ ಕುಟುಂಬಗಳು ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸವಾಗಿದ್ದರು.
16 ಎಕರೆ ಅರಣ್ಯ ಮೀಸಲು ಪ್ರದೇಶ ವಶ ಈ ಪ್ರದೇಶ ಮೀಸಲು ಅರಣ್ಯಕ್ಕೆ ಸೇರಿದ್ದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಆಗಮಿಸಿ ಯಂತ್ರಗಳಿಂದ ಮನೆಗಳು, ಕಟ್ಟಿದ ಫ್ಯಾಕ್ಟರಿಯೊಂದನ್ನು ಧ್ವಂಸ ಮಾಡಿ ತೆರವುಗೊಳಿಸಿದರು. ಮನೆಗಳ ಆಸುಪಾಸಿನಲ್ಲಿ ರೈತರು ಬೆಳೆದಿದ್ದ ರಾಗಿ ಬೆಳೆ ಜಮೀನನ್ನೂ ವಶಕ್ಕೆ ಪಡೆದರು.
ಶಂಕರ ನಾರಾಯಣ ಎಂಬುವರ ಪೂರ್ವಿಕರು 50 ವರ್ಷಗಳ ಹಿಂದೆ ಈ ಭಾಗದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಈ ಮನೆಗೆ ಗ್ರಾಪಂಗೆ ಕಂದಾಯ ಕಟ್ಟಲಾಗುತ್ತಿತ್ತು. ಅಲ್ಲದೆ ವಿದ್ಯುತ್ ಸಂಪರ್ಕ ನೀಡಲಾಗಿತ್ತಂತೆ. ಐವತ್ತು ವರ್ಷದಿಂದ ಜಮೀನು ಬಗ್ಗೆ ಕೇಳದ ಅರಣ್ಯ ಇಲಾಖೆಯವರು ದಿಢೀರ್ ಆಗಮಿಸಿ ವಾಸವಿದ್ದ ಮನೆಯನ್ನು ಒಡೆದು ಹಾಕಿದ್ದು, ಶಂಕರ ನಾರಾಯಣ ಕುಟುಂಬಸ್ಥರು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ನಮಗೆ ಮನೆ ಬಿಟ್ಟರೆ ಬೇರೆ ಗತಿಯಿಲ್ಲ. ದಯವಿಟ್ಟು ಮನೆ ಒಡೆಯಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ಕಾಲು ಹಿಡಿದು ಬೇಡಿದರೂ ಅಧಿಕಾರಿಗಳ ತಮ್ಮ ಕಾರ್ಯ ಮುಂದುವರೆಸಿದ್ದಾರೆ. ಪಟ್ಟು ಬಿಡದೆ ಎಲ್ಲಾ ಮನೆಗಳನ್ನು ತೆರವು ಮಾಡಿದ್ದಾರೆ. ಗೋಮಾಳ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ದಾಖಲೆಗಳಿಗಾಗಿ ಸ್ಥಳೀಯ ಗ್ರಾಪಂ ಕಂದಾಯ ಪಾವತಿಸಿಕೊಂಡು ಬರುತ್ತಿದ್ದರೂ ಅಧಿಕಾರಿಗಳು ಈಗ ಅರಣ್ಯ ಪ್ರದೇಶ ಎಂದು ಮನೆಗಳನ್ನು ತೆರವು ಮಾಡಿದ್ದು ಎಷ್ಟು ಸರಿ ಎಂದು ಮನೆ ಕಳೆದುಕೊಂಡ ಕುಟುಂಬಸ್ಥರು ಪ್ರಶ್ನಿಸಿದರು. ಮನೆ ಕಳೆದುಕೊಂಡು ದಿಕ್ಕು ತೋಚದಂತಾಗಿದ್ದು ವಿಷ ಕುಡಿಯುವುದೊಂದೇ ಬಾಕಿ. ಬೇರೆ ದಾರಿ ಕಾಣುತ್ತಿಲ್ಲ ಎಂದು ಮನೆಯವರು ಬೇಡಿಕೊಳ್ಳುತ್ತಿದ್ದ ದೃಶ್ಯಗಳು ಮನಕಲುಕುವಂತಿತ್ತು.
ಒತ್ತುವರಿ ಮಾಡಿಕೊಂಡಿದ್ದ ಸುಮಾರು 16 ಎಕರೆ ಮೀಸಲು ಅರಣ್ಯ ಪ್ರದೇಶ ವಶಪಡಿಸಿಕೊಳ್ಳಲಾಗಿದೆ. ಗುಳ್ಳಹಳ್ಳಿ ಗ್ರಾಮದ ಸರ್ವೆ ನಂಬರ್ 01 ಮತ್ತು ದೊಡ್ಡಹರಳಗೆರೆ ಗ್ರಾಮದ ಸರ್ವೆ ನಂಬರ್ 45ರಲ್ಲಿ ಒತ್ತುವರಿ ತೆರವು ಮಾಡುತ್ತಿದ್ದೇವೆ. ಸುಮಾರು 30 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಭೂಮಿ ಒತ್ತುವರಿ ತೆರವು ಮಾಡಿದ್ದೇವೆ. ಅರಣ್ಯ ನಾಶಪಡಿಸಿ ಅಕ್ರಮ ಮನೆ. ತೋಟ ಮಾಡಿಕೊಂಡಿದ್ದ ಜನರು ಅಕ್ರಮವಾಗಿ ನೆಲೆಸಿದ್ದಾರೆ. ಈ ಜಾಗದಲ್ಲಿ ಮತ್ತೆ ಅರಣ್ಯ ಮರು ಸ್ಥಾಪಿಸಲು ಮೀಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ನಾಲ್ಕು ಜೆಸಿಬಿ ಮತ್ತು 40ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.