ಬಾಗಲಕೋಟೆ: ಬಾಗಲಕೋಟೆ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿ ಸೇರಿದಂತೆ ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳಲ್ಲಿ ಸೋಮವಾರದಂದು 12 ಅಭ್ಯರ್ಥಿಗಳಿಂದ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ. ಬಾಗಲಕೋಟೆ ಮತಕ್ಷೇತ್ರದಿಂದ 6, ಬಾದಾಮಿ ಕ್ಷೇತ್ರದಿಂದ 4, ಹುನಗುಂದ ಕ್ಷೇತ್ರದಿಂದ 4, ಮುಧೋಳ ಕ್ಷೇತ್ರದಿಂದ 2, ತೇರದಾಳ ಕ್ಷೇತ್ರದಿಂದ 1 ಹಾಗೂ ಬೀಳಗಿ ಮತ್ತು ಜಮಖಂಡಿಯಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಬಾಗಲಕೋಟೆ ಮತಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಹುಲ್ಲಪ್ಪ ಮೇಟಿ 2 ನಾಮಪತ್ರ ಸಲ್ಲಿಸಿದರೆ, ಪಕ್ಷೇತರದಿಂದ ಮಲ್ಲಿಕಾರ್ಜುನ ಚರಂತಿಮಠ, ಜೆಡಿಎಸ್ ಪಕ್ಷದಿಂದ ದೇವರಾಜ ಪಾಟೀಲ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಬಾಬುಶಾ ರೊಳ್ಳಿ, ಆಮ್ ಆದ್ಮಿ ಪಕ್ಷದಿಂದ ರಮೇಶ ಬದ್ನೂರ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಬಾದಾಮಿ ಮತಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದ ಆಭ್ಯರ್ಥಿಯಾಗಿ ಭೀಮಸೇನ್ ಚಿಮ್ಮನಕಟ್ಟಿ ಮತ್ತು ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಮಾರುತಿ ಜಮೀನ್ದಾರ್ ನಾಮಪತ್ರ ಸಲ್ಲಿಸಿದ್ದಾರೆ.
ಹುನಗುಂದ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಷಡಕ್ಷರಯ್ಯ ನವಲಿಹಿರೇಮಠ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ದೇಸಾಯಗೌಡ ಮಲ್ಲನಗೌಡ, ಕಾಂಗ್ರೇಸ್ ಪಕ್ಷದಿಂದ ವಿಜಯಾನಂದ ಕಾಶಪ್ಪನವರ 2 ನಾಮಪತ್ರ ಸಲ್ಲಿಸಿದ್ದಾರೆ. ಮುಧೋಳ ಮತಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಆರ್.ಬಿ.ತಿಮ್ಮಾಪೂರ 2 ನಾಮಪತ್ರ ಸಲ್ಲಿಸಿದ್ದಾರೆ. ತೇರದಾಳ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಂಬಾದಾಸ್ ಕಾಮೂರ್ತಿ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಉಳಿದ ಬೀಳಗಿ ಮತ್ತು ಜಮಖಂಡಿಯಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಪ್ರಾರಂಭದಿಂದ ಇಲ್ಲಿಯವರೆಗೆ ಜಿಲ್ಲೆಯ ಎಳು ಮತಕ್ಷೇತ್ರಗಳಲ್ಲಿ ಒಟ್ಟು 32 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪಿ ಸುನೀಲಕುಮಾರ ತಿಳಿಸಿದ್ದಾರೆ.