ಕರ್ನಾಟಕ

karnataka

ETV Bharat / state

ಬಾಗಲಕೋಟೆ: ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿ ಹೃದಯಾಘಾತದಿಂದ ಸಾವು - ಶಂಭುಲಿಂಗೇಶ್ವರ ಮಾಧ್ಯಮಿಕ ಶಾಲೆ

ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ನಡೆದಿದೆ.

student
ಬಾಗಲಕೋಟೆ: ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

By ETV Bharat Karnataka Team

Published : Sep 30, 2023, 10:49 PM IST

ಬಾಗಲಕೋಟೆ: ಪರೀಕ್ಷೆ ಬರೆಯುತ್ತಿದ್ದ ವೇಳೆಯೇ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ನಡೆದಿದೆ. 9ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದ ಬಾಲಕ ಅರ್ಧ ವಾರ್ಷಿಕ ಪರೀಕ್ಷೆ ಬರೆಯಲು ಶಾಲೆಗೆ ಹೋದ ವೇಳೆ ಈ ಘಟನೆ ಸಂಭವಿಸಿದೆ. ರಾಹುಲ್​ ಕೋಲಕಾರ (15) ಮೃತ ವಿದ್ಯಾರ್ಥಿ.

ಅರ್ಧ ವಾರ್ಷಿಕ ಪರೀಕ್ಷೆ ಬರೆಯುತ್ತಿದ್ದ ವೇಳೆ ಬಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ತೀವ್ರವಾಗಿ ತೊಂದರೆ ಉಂಟಾದಾಗ ಶಿಕ್ಷಕರು ಹಾಗೂ ಇತರ ಶಾಲಾ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ವಿದ್ಯಾರ್ಥಿಗೆ ಹೃದಯ ಸಂಬಂಧಿ ಖಾಯಿಲೆ ಇತ್ತು ಎನ್ನಲಾಗಿದೆ.

ರಾಹುಲ್​ ಕೋಲಕಾರ ಹುಲ್ಯಾಳ ಗ್ರಾಮದ ಶಂಭುಲಿಂಗೇಶ್ವರ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಓದಿನಲ್ಲಿಯೂ ಮುಂದಿದ್ದ. ಹೃದಯ ರೋಗ ಸಂಬಂಧಿಸಿದಂತೆ ಆಗಾಗ ತೊಂದರೆ ಅನುಭವಿಸುತ್ತಿದ್ದ ಎಂದು ಪಾಲಕರು ಮಾಹಿತಿ ನೀಡಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದ ಕಾರಣದಿಂದ ವಿದ್ಯಾರ್ಥಿಗೆ ಹೃದಯಘಾತ ಆಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ನಾಟಕ ಪ್ರದರ್ಶನದ ವೇಳೆ ಹೃದಯಾಘಾತ: ನಾಟಕ ಪ್ರದರ್ಶನದ ವೇಳೆ ದಿಢೀರ್​ ಕುಸಿದು ಬಿದ್ದು ಪೋಸ್ಟ್​​ಮ್ಯಾನ್ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಘಟನೆ ಇತ್ತೀಚೆಗೆ ನಡೆದಿತ್ತು. ಶರಣು ಬಾಗಲಕೋಟೆ (24) ಹೃದಯಾಘಾತದಿಂದ ಸಾವನ್ನಪ್ಪಿದ ಪೋಸ್ಟ್​​ಮ್ಯಾನ್.

ಇದನ್ನೂ ಓದಿ:2032ರ ವೇಳೆಗೆ ಹೃದಯಾಘಾತ ಪ್ರಕರಣಗಳ ಸಂಖ್ಯೆ 16ಮಿಲಿಯನ್​ನಷ್ಟು ಹೆಚ್ಚಳ!

ಅದಕ್ಕೂ ಮುನ್ನ ಯುವತಿ ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಬಂಟ್ವಾಳದಲ್ಲಿ ನಡೆದಿತ್ತು. ಕಾವಳಪಡೂರು ಗ್ರಾಮದ ಮಧ್ವಗುತ್ತು ರಾಜೀವ ಶೆಟ್ಟಿ ಮತ್ತು ಮೀನಾ ದಂಪತಿಯ ಪುತ್ರಿ ಮಿತ್ರಾ ಶೆಟ್ಟಿ (23) ಮೃತರು. ಬಿ.ಸಿ. ರೋಡ್‌ನಲ್ಲಿ ಖಾಸಗಿ ಉದ್ಯೋಗದಲ್ಲಿದ್ದ ಮಿತ್ರಾ ಮಧ್ವದಲ್ಲಿ ದೊಡ್ಡಮ್ಮನ ಮನೆಯಲ್ಲಿ ತಾಯಿ ಜತೆ ವಾಸವಿದ್ದರು. ಮಂಗಳವಾರ ರಾತ್ರಿ ಊಟ ಮುಗಿಸಿ ತಾಯಿಯೊಂದಿಗೆ ಮಲಗಿದ್ದರು.

ಬೆಳಗ್ಗೆ ಹೊತ್ತು ಕಳೆದರೂ ಏಳದಿರುವುದನ್ನು ಗಮನಿಸಿದ ತಾಯಿ ಎಬ್ಬಿಸುವಾಗ ಅವರು ಮೃತಪಟ್ಟಿರುವುದು ತಿಳಿದು ಬಂದಿತ್ತು. ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸಾವಿಗೆ ಹೃದಯಾಘಾತವೇ ಕಾರಣ ಎಂದು ವೈದ್ಯರು ದೃಢಪಡಿಸಿದ್ದರು. ಮಿತ್ರಾ ಪದವೀಧರೆಯಾಗಿದ್ದು, ಸ್ಥಳೀಯವಾಗಿ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಯುವತಿಯ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಸಂತಾಪ ಸೂಚಿಸಿದ್ದರು.

9ನೇ ತರಗತಿ ಬಾಲಕನಿಗೆ ಹೃದಯಾಘಾತ:ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಲಕ್ನೋದಲ್ಲಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ತರಗತಿಯಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿತ್ತು.ಅಸ್ವಸ್ಥಗೊಂಡ ವಿದ್ಯಾರ್ಥಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟೊತ್ತಿಗೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ತಪಾಸಣೆ ನಡೆಸಿದ ಬಳಿಕ ವೈದ್ಯರು ತಿಳಿಸಿದ್ದರು.

ಇದನ್ನೂ ಓದಿ:ಆತಂಕ ಮೂಡಿಸುತ್ತಿರುವ ಹೃದಯಾಘಾತ ಪ್ರಕರಣ; ಒಂದೇ ದಿನದಲ್ಲಿ ನಾಲ್ವರು ಯುವಕರ ಸಾವು

ABOUT THE AUTHOR

...view details