ಬಾಗಲಕೋಟೆ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾದಾಮಿ ಬಿಟ್ಟು ಕೋಲಾರ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ನಿರ್ಧಾರ ಮಾಡಿದ ಹಿನ್ನೆಲೆಯಲ್ಲಿ, ವಿದೇಶದಲ್ಲಿರುವ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ. ಯುರೋಪ್ ಖಂಡದಲ್ಲಿರುವ ಹಾಲೆಂಡ್ ದೇಶದಲ್ಲಿ ಇದ್ದುಕೊಂಡು ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಮೂಲತಃ ಬಾದಾಮಿ ಕ್ಷೇತ್ರದ ನಿವಾಸಿಯಾಗಿರುವ ಅಶೋಕ ಹಟ್ಟಿ ಅವರು, ಕಳೆದ 15 ವರ್ಷಗಳಿಂದ ಹಾಲೆಂಡಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಮತ್ತು ಉದ್ಯಮಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಡಿಯೋ ಮೂಲಕ ಹಾಲೆಂಡ್ನಿಂದಲೇ ಮಾತನಾಡಿರುವ ಹಟ್ಟಿ ಅವರು, ಉತ್ತರ ಕರ್ನಾಟಕದ ಬಾದಾಮಿ ಜಿಲ್ಲೆಯನ್ನು ಬಿಟ್ಟು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದನ್ನು ಕೇಳಿ ಬಹಳ ಬೇಜಾರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಬಾರಿ 2018ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಮತಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಸ್ಪರ್ಧೆ ಮಾಡಿದ್ದಾರೆ ಎಂಬ ಕಾರಣಕ್ಕೆ ಹಾಲೆಂಡ್ನಿಂದ ಬಾದಾಮಿಗೆ ಬಂದು ಮತ ಹಾಕಿದ್ದೆ. ಈ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ. ಬಾದಾಮಿ ಕ್ಷೇತ್ರವು ಚಾಲುಕ್ಯರ ನಾಡು, ಕನ್ನಡ ನಾಡು ಕಂಡ ವೀರ ಇಮ್ಮಡಿ ಪುಲಕೇಶಿ ಆಳ್ವಿಕೆ ನಡೆಸಿದಂತಹ ಐತಿಹಾಸಿಕ ಸ್ಥಳವಾಗಿದೆ. ಕಳೆದ ಬಾರಿ ಈ ಕ್ಷೇತ್ರದಿಂದಲೇ ವಿಧಾನಸಭೆ ಚುನಾವಣೆಗೆ ಅವರು ಸ್ಪರ್ಧಿಸಿದ್ದರು. ಸಿದ್ದರಾಮಯ್ಯ ಅವರು ಈಗಿನ ಕಾಲದ ಇಮ್ಮಡಿ ಪುಲಿಕೇಶಿಯಂತೆ ಇದ್ದಂತೆ, ಬಾದಾಮಿ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ ಮತ್ತು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೋಟಿಗಟ್ಟಲೆ ಅನುದಾನವನ್ನು ಬಾದಾಮಿ ಕ್ಷೇತ್ರಕ್ಕೆ ನೀಡಿ ಅಭಿವೃದ್ಧಿ ಮಾಡಿದ್ದಾರೆ ಎಂದು ಅಭಿಮಾನಿ ಅಶೋಕ ಹೇಳಿದ್ದಾರೆ.
ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಾಯ.. ಹಿಂದೆ ಕಾಣದ ಬಾದಾಮಿ ದೊಡ್ಡಮಟ್ಟದಲ್ಲಿ ಅಭಿವೃದ್ಧಿಯಾಗಿದೆ. ಸಿದ್ದರಾಮಯ್ಯನವರು ಬಾದಾಮಿಯ ಶಾಸಕರಾದ ಹಿನ್ನೆಲೆ, ಉತ್ತರ ಕರ್ನಾಟಕಕ್ಕೆ ದೊಡ್ಡ ಶಕ್ತಿ ಬಂದಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಾದಾಮಿ ಮತಕ್ಷೇತ್ರವು ಪ್ರವಾಸಿಗರ ತಾಣವಾಗಿದೆ. ಪ್ರವಾಸಿಗರ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿರುವ ಸಿದ್ದರಾಮಯ್ಯನವರು, ಹಿಂದಿನ ಶಾಸಕರಾದ ಬಿಬಿ ಚಿಮ್ಮನಕಟ್ಟಿ ಅವರು ಮತ್ತು ಮಹಾಗುಂಡಪ್ಪ ಕಲ್ಲಪ್ಪ ಪಟ್ಟನಶೆಟ್ಟಿ ಅವರು ಸಹ ಬಾದಾಮಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು. ಈ ಬಾರಿ ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಎಂದು ಹಾಲೆಂಡಿನಲ್ಲಿರುವ ಸಿದ್ದರಾಮಯ್ಯ ಅಭಿಮಾನಿ ಅಶೋಕ ಹಟ್ಟಿಯವರು ಒತ್ತಾಯಿಸಿದ್ದಾರೆ.