ಅಬಕಾರಿ ಇಲಾಖೆ ಸಚಿವ ಆರ್ ಬಿ ತಿಮ್ಮಾಪೂರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ಬಾಗಲಕೋಟೆ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆಯಲ್ಲ. ಅಲ್ಲಿಯ ಸ್ಪೀಕರ್, ಎಷ್ಟು ಬಾರಿ ನಮ್ಮ ನಾಯಕರನ್ನು ಹೊರ ಹಾಕಿದ್ದಾರೆ? ಎಷ್ಟು ಹೊತ್ತು ಹೊರಹಾಕಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಪಕ್ಷದ ಮುಖಂಡರಿಗೆ ಅಬಕಾರಿ ಇಲಾಖೆ ಸಚಿವ ಆರ್ ಬಿ ತಿಮ್ಮಾಪೂರ ಟಾಂಗ್ ನೀಡಿದ್ದಾರೆ.
ಬಾಗಲಕೋಟೆ ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ವಿರೋಧ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು. ಅದ್ರ ಬಗ್ಗೆ ಮಾತನಾಡಲು ಯೋಗ್ಯತೆ ಅವರಿಗೆ ಇಲ್ಲ, ಮೊದಲು ಬಿಜೆಪಿಗರು ತಾವು ತಿದ್ದಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಇದೇ ಸಮಯದಲ್ಲಿ ಗ್ಯಾರಂಟಿ ಯೋಜನೆ ವೈಫಲ್ಯದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ತಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾವು ಕೊಡುವ ಗ್ಯಾರಂಟಿಗಳನ್ನು ಜನ ಅನುಭವಿಸ್ತಿದ್ದಾರೆ. ಕಾಂಗ್ರೆಸ್ನವರು ಇಷ್ಟೆಲ್ಲಾ ಕಾರ್ಯಕ್ರಮ ಕೊಟ್ರು ಎಂಬ ಖುಷಿಯಲ್ಲಿದ್ದಾರೆ ಜನ. ಬಿಜೆಪಿಯವರು ಮೋದಿಯವರ ಭ್ರಮೆಯಲ್ಲಿದ್ದಾರೆ. ಮೋದಿಯವರು ಬಂದರು, ಹೋದರು, ಎಲ್ಲೆಲ್ಲಿ ಓಡಾಡಿದ್ರು, ಎಷ್ಟು ಸೀಟ್ ಗೆದ್ರು ನೋಡಿದಿರಲ್ಲ ಎಂದು ಬಿಜೆಪಿ ನಾಯಕರನ್ನು ಕುಟುಕಿದರು.
ರಾಜ್ಯದಲ್ಲಿ ಸರ್ಕಾರ ನಡೆಸಿದವ್ರಿಗೆ ಮತ ಕೇಳೋ ಯೋಗ್ಯತೆ ಇಲ್ಲದ್ದರಿಂದ ಮೋದಿಯವ್ರನ್ನು ಕರೆಯಿಸಿದರು. ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಗರು ದಿಕ್ಕು ಪಾಲಾಗ್ತಿದ್ದಾರೆ. ಅವರಲ್ಲಿ ಆತಂಕ ಸೃಷ್ಟಿಯಾಗಿದೆ. ಏನಪ್ಪ ನಮ್ಮ ಗತಿ ಅನ್ನುವಂತಾಗಿದೆ. ರಾಜ್ಯದ ಬಿಜೆಪಿ ಮುಖಂಡರು ಹೈಕಮಾಂಡ್ ನಂಬಿಕೆ ಕಳೆದುಕೊಂಡಿದ್ದಾರೆ. ಅವರಿಗೆ ಹೈಕಮಾಂಡ್ ನಾಯಕರು ಸಿಗುತ್ತಿಲ್ಲ. ವಿಪಕ್ಷ ನಾಯಕ ಆಯ್ಕೆಗೆ ಒಬ್ಬ ಯೋಗ್ಯ ವ್ಯಕ್ತಿ ಇಲ್ಲ. ವಿಪಕ್ಷ ನಾಯಕನಿಲ್ಲದೇ ಅಧಿವೇಶನ ನಡೆಯುವಂತೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದ ಸಚಿವರು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ವಿರುದ್ಧ ಬಿ ಕೆ ಹರಿಪ್ರಸಾದ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆಸಿ, ಬಿ ಕೆ ಹರಿಪ್ರಸಾದ್ ಅವರು ಯಾವುದೋ ಒಂದು ಸಭೆಯಲ್ಲಿ ಹೇಳಿದ್ದು, ಅವರ ಶಕ್ತಿ ನಮಗೆ ಗೊತ್ತಿಲ್ಲ. ಎಂಎಲ್ಎಗಳು ಹೈಕಮಾಂಡ್ ಹೇಳಿದ್ರೆ ಅದು ಒಂದು ಶಕ್ತಿ ಅಂತೀವಿ. ಎಂಎಲ್ಎ ಗಳೆಲ್ಲ ಸಿದ್ದರಾಮಯ್ಯಗೆ ಸಪೋರ್ಟ್ ಇದ್ದೇವಿ. ನಮ್ಮ ಪರ ಹೈಕಮಾಂಡ್ ಸ್ಟ್ರಾಂಗ್ ಇದೆ ಎಂದು ಹೇಳಿದರು.
ಸಿದ್ದರಾಮಯ್ಯನಿಗೆ 136 ಎಂಎಲ್ಎ ಸಪೋರ್ಟ್:ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನಿಗೆ 136 ಎಂ ಎಲ್ ಎ ಗಳ ಸಪೋರ್ಟ್ ಇದೆ. ಹೈ ಕಮಾಂಡ್ದ ಬೆಂಬಲವೂ ಇದೆ. ಆದ್ದರಿಂದ ಇಂತಹ ಮಾತುಗಳಿಗೆ ಬೆಲೆ ಇಲ್ಲ. ಬಿ ಕೆ ಹರಿಪ್ರಸಾದ್ ಅವರು ಯಾವ ದೃಷ್ಟಿ ಇಟ್ಟುಕೊಂಡು ಮಾತಾಡಿದ್ದಾರೆ ಗೊತ್ತಿಲ್ಲ. ಶಾಸಕರು ಶಾಸಕಾಂಗ ಪಕ್ಷದಲ್ಲಿ ನಿರ್ಣಯ ಆಗೋದು ಮುಖ್ಯಮಂತ್ರಿ, ಅದರ ಜೊತೆಗೆ ಹೈಕಮಾಂಡ್ ಆಶೀರ್ವಾದ. ಇವು ಎರಡು ಸಿದ್ದರಾಮಯ್ಯ ಅವರಿಗೆ ಗಟ್ಟಿಯಾಗಿ ಇರೋದ್ರಿಂದ, ಸರ್ಕಾರಕ್ಕೆ ಏನೂ ಆಗೋದಿಲ್ಲ. ಬಿಜೆಪಿಯವರು ಇದನ್ನು ಹುಟ್ಟುಹಾಕುತ್ತಿದ್ದಾರೆ ಅದೇನು ಆಗಲ್ಲ ಎಂದು ಹೇಳಿದರು.
ಇದನ್ನೂ ಓದಿ :ನಿಮ್ಮ ಹೆಸರಿನಲ್ಲೇ ರಾಮನಿದ್ದಾನೆ, ಸತ್ಯರಾಮಯ್ಯ ಆಗಿದ್ದರೆ ನೈಸ್ಗೆ ನ್ಯಾಯ ಕೊಡಿ: ಹೆಚ್.ಡಿ.ಕುಮಾರಸ್ವಾಮಿ