ಬಾಗಲಕೋಟೆ:ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಕಾಮುಕನನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆ ಆಗಿದ್ದ ಈತ, ಜೈಲಿನಿಂದ ಬಂದು ಮತ್ತೆ ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ಸಿಕ್ಕಿಬಿದ್ದು ಮರಳಿ ಕಂಬಿ ಎಣಿಸುವಂತಾಗಿದೆ.
ಕುಡ್ಡನಿಂಗಪ್ಪ ಕರಿಯಪ್ಪ ಮಾದರ (42) ಎಂಬಾತನೆ ಬಂಧಿತ ಆರೋಪಿ. ಈತ ನಗರದ ಅಪ್ರಾಪ್ತೆಯೊಬ್ಬಳಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದ, ಬಳಿಕ ಆತನಿಂದ ಬಾಲಕಿಯು ತಪ್ಪಿಸಿಕೊಂಡು ಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅಪರಾಧಿಯನ್ನು ಬಂಧಿಸಿದ್ದಾರೆ.
ಕುಡ್ಡನಿಂಗಪ್ಪ ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಕಿಡ್ನಾಪ್ ಪ್ರಕರಣಗಳಲ್ಲಿ ಮೂರು ಸಲ ಆರೋಪ ಸಾಬೀತಾಗಿ 16 ವರ್ಷ ಜೈಲು ಶಿಕ್ಷೆ ಅನುಭವಿಸಿ,14 ತಿಂಗಳ ಹಿಂದೆ ಹೊರಬಂದಿದ್ದ. ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸಿ ಸಿಕ್ಕಿಬಿದ್ದಿದ್ದಾನೆ.
ವಿಜಯಪುರ ಜಿಲ್ಲೆಯ ಜುಮನಾಳ ಗ್ರಾಮದ ನಿಂಗಪ್ಪ ಸೆ. 28ರಂದು ಬಾಗಲಕೋಟೆ ನಗರಕ್ಕೆ ಬಂದಿದ್ದ. ಮಧ್ಯಾಹ್ನ ಇಬ್ಬರು ಅಪ್ರಾಪ್ತೆಯರನ್ನು ಬಲೆಗೆ ಕೆಡವಲು ಹೋಗಿ ವಿಫಲನಾಗಿದ್ದ. ಬಳಿಕ ಮತ್ತೊಬ್ಬ ಬಾಲಕಿಗೆ ಆಕೆಯ ತಂದೆ ಹೇಳಿದ್ದಾನೆ ಎಂದು ಸುಳ್ಳು ಹೇಳಿ ಗುಲಾಬಿ ಹೂವಿನ ಕುಂಡಲಿ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರಕ್ಕೆ ಮುಂದಾಗಿದ್ದ. ಈ ಸಮಯದಲ್ಲಿ ವೃದ್ಧರೊಬ್ಬರು ಅಲ್ಲಿಗೆ ಬಂದಿದ್ದರಿಂದ ಬಾಲಕಿ ಕಾಮುಕನಿಂದ ಪಾರಾಗಿ ಬಂದು ಮನೆಯಲ್ಲಿ ವಿಷಯ ತಿಳಿಸಿದ್ದಳು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಲ್ಲದೆ ಪೊಲೀಸರ ಕ್ಷಿಪ್ರ ಕಾರ್ಯಚರಣೆಗೆ ಅವರು ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.