ಬಾಗಲಕೋಟೆ:ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ವರುಣನ ಅಬ್ಬರ ಜೋರಾಗಿದ್ದು, ರಬಕವಿ ಬನಹಟ್ಟಿ ತಾಲೂಕು ವ್ಯಾಪ್ತಿಯಲ್ಲಿನ 111 ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಬಾಗಲಕೋಟೆ ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ಕೆರೆ ಕಟ್ಟೆಗಳೆಲ್ಲಾ ತುಂಬಿ ಹರಿಯುತ್ತಿರುವ ಪರಿಣಾಮ ಫಸಲಿಗೆ ಬಂದ ಬೆಳೆ ಸಮೇತ ಕೃಷಿ ಭೂಮಿಯೂ ನೀರು ಪಾಲಾಗಿದೆ. ಜಿಲ್ಲೆಯಾದ್ಯಂತ ಸಂಚಾರ ಸೇರಿದಂತೆ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ವಾಸಿಸಲು ಸೂಕ್ತ ಸ್ಥಳ ಹುಡುಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಭೀಕರ ಮಳೆಗೆ ಹಾನಿಗೊಳಗಾದ ಮನೆಗಳು, ಸಂತ್ರಸ್ತರ ಅಳಲು ವರುಣನ ಅಬ್ಬರಕ್ಕೆ ರಬಕವಿ ಬನಹಟ್ಟಿ ತಾಲೂಕು ಸಂಪೂರ್ಣ ಸ್ತಬ್ಧವಾಗಿದ್ದು, ಪ್ರಾಥಮಿಕ ವರದಿ ಪ್ರಕಾರ ಮೂರು ದಿನಗಳಲ್ಲಿ 111 ಮನೆಗಳಿಗೆ ಹಾನಿಯಾಗಿದೆ ಎಂದು ತಹಶೀಲ್ದಾರ್ ಪ್ರಶಾಂತ ಚನಗೊಂಡ ತಿಳಿಸಿದ್ದಾರೆ.
ಮುಂದಿನ ಮೂರು ದಿನಗಳ ಕಾಲ ಜಿಲ್ಲಾದ್ಯಂತ ಮಳೆ ಆಗಲಿರುವ ಪರಿಣಾಮ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನದಿ ದಡದಲ್ಲಿರುವ ಹಾಗೂ ಮಣ್ಣಿನ ಮನೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.