ಬಾಗಲಕೋಟೆ:ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ, ಮುಧೋಳ ರೈತರು ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರತಿ ಟನ್ ಕಬ್ಬಿಗೆ 2900 ರೂ. ಬೆಲೆ ನಿಗದಿ ಮಾಡಿ ಎಂದು ಮುಧೋಳ ರೈತರು ನಡೆಸುತ್ತಿರುವ ಹೋರಾಟ 47ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಕಾರ್ಖಾನೆ ಮಾಲೀಕರು ಮಾತ್ರ ರೈತರ ಬೇಡಿಕೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ, ಕಾರ್ಖಾನೆ ಮಾಲೀಕರು ಹಾಗೂ ರೈತರ ಮಧ್ಯೆ ಸಂಧಾನ ಸಭೆ ಮಾಡಲು ಯತ್ನಿಸಿದ್ದು ವಿಫಲವಾಗಿದೆ.
ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹ.. 47ನೇ ದಿನಕ್ಕೆ ಕಾಲಿಟ್ಟ ಮುಧೋಳ ರೈತರ ಪ್ರತಿಭಟನೆ ಹೀಗಾಗಿ ಕಳೆದ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಮುಧೋಳ ತಾಲೂಕು ಸಂಪೂರ್ಣವಾಗಿ ಸ್ತಬ್ದವಾಗಿತ್ತು. ಹೋರಾಟದ ಸ್ವರೂಪ ಅರಿತ ಜಿಲ್ಲಾಡಳಿತ ಬುಧವಾರದಿಂದ ನವೆಂಬರ್ 19ರವರೆಗೆ ದಿಢೀರ್ ನಿಷೇಧಾಜ್ಞೆ ಜಾರಿಗೊಳಿಸಿತ್ತು. ನಾಲ್ಕು ದಿನಗಳ ಕಾಲ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಬಂದ್ ಮಾಡಿದ್ದು, ಶುಕ್ರವಾರದ ಮುಧೋಳ ಸಂತೆ ರದ್ದುಗೊಳಿಸಲಾಗಿತ್ತು. ಆದರೆ ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ರೈತರು ಬಂದ್ ವಾಪಸ್ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆ ಇಂದು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ನಲ್ಲಿ ಸೇರಿದ ರೈತರು , ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆ ಕೂಗಿ, ಪಾದೆಯಾತ್ರೆ ಮೂಲಕ ತಹಶೀಲ್ದಾರ್ ಕಛೇರಿಗೆ ತೆರಳಿ ಬೀಗ ಜಡಿಯಲು ಮುಂದಾಗಿದ್ದಾರೆ. ಆದರೆ ಪೊಲೀಸರು ಮುತ್ತಿಗೆ ತಡೆಯಲು ಪ್ರಯತ್ನಿಸಿದ್ದಾರೆ. ಇಂದು ಕಬ್ಬಿಗೆ ಬೆಲೆ ನಿಗದಿಯಾಗಲೇಬೇಕೆಂದು ತಹಶೀಲ್ದಾರ್ ಕಛೇರಿ ಎದುರು ಧರಣಿ ಕುಳಿತಕೊಂಡ ರೈತರು, ಬೆಲೆ ನಿಗದಿಯಾಗದಿದ್ದಲ್ಲಿ ಮುಂದಾಗುವ ಅನಾಹುತಗಳಿಗೆಲ್ಲ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರೇ ಜವಾಬ್ದಾರರು ಎಂದು ಖಡಕ್ ಸಂದೇಶ ರವಾನಿಸಿದ್ದಾರೆ. ನಾಳೆಯಿಂದ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಸರ್ಕಾರ, ಕಾರ್ಖಾನೆ ಮಾಲೀಕರಿಗೆ ನೇರವಾಗಿ ಸಂದೇಶ ನೀಡಿದ್ದಾರೆ.
ಸುಮಾರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಕೂಡ ಸಚಿವರುಗಳಾದ ಗೋವಿಂದ ಕಾರಜೋಳ ಹಾಗೂ ಮುರಗೇಶ ನಿರಾಣಿ ಮೌನ ವಹಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಮನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ರವಾನಿಸಿದ್ದಾರೆ.
ಒಟ್ಟಿನಲ್ಲಿ ರೈತರು ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ಬೀದಿಗಿಳಿದು ಪ್ರತಿಭಟಿಸುತ್ತಿದ್ದರೂ, ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ತಟಸ್ಥ ನೀತಿ ಅನುಸರಿಸುತ್ತಿದ್ದಾರೆ. ಕಾರ್ಖಾನೆ ಮಾಲೀಕರ ಮೊಂಡುತನ ಇದೇ ರೀತಿ ಮುಂದುವರೆದಲ್ಲಿ, ರೈತರ ಹೋರಾಟ ಉಗ್ರ ಸ್ವರೂಪಕ್ಕೆ ತಿರುಗುವ ಸಾಧ್ಯತೆ ಇದೆ. ಹಾಗಾಗಿ ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಕಬ್ಬಿಗೆ ಶೀಘ್ರವೇ ಬೆಲೆ ನಿಗದಿ ಮಾಡಬೇಕಿದೆ.
ಇದನ್ನೂ ಓದಿ:ಬೇಡಿಕೆ ಈಡೇರಿಸುವಂತೆ ಕಬ್ಬು ಬೆಳೆಗಾರರ ಆಗ್ರಹ.. ಮಂಡ್ಯದಲ್ಲಿ ರೈತರ ಬೃಹತ್ ಪ್ರತಿಭಟನೆ