ಕರ್ನಾಟಕ

karnataka

ETV Bharat / state

ಕಳಪೆ ಕಾಮಗಾರಿ ಆರೋಪ : ಶಾಸಕರಿಂದ ರಸ್ತೆ ಕಾಮಗಾರಿಗೆ ತಡೆ

ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಶಾಸಕ ಸಿದ್ದು ಸವರಿ ಆರೋಪದ ಹಿನ್ನೆಲೆಯಲ್ಲಿ ಬನಹಟ್ಟಿ ಬಸ್​ ನಿಲ್ದಾಣದ ಸಮೀಪ ನಡೆಯುತ್ತಿದ್ದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಶಾಸಕ ಸಿದ್ದು ಸವದಿ

By

Published : May 25, 2019, 8:50 PM IST

ಬಾಗಲಕೋಟೆ : ಬನಹಟ್ಟಿ ಬಸ್ ನಿಲ್ದಾಣದಲ್ಲಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಇಂದು ಬೆಳಗ್ಗೆ ಪ್ರಾರಂಭವಾಗಿತ್ತು. ಮಧ್ಯಾಹ್ನ ಹೊತ್ತು ಸ್ಥಳೀಯ ಶಾಸಕ ಸಿದ್ದು ಸವದಿ ಕಾಮಗಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಸಂದರ್ಭ ಯಾವುದೇ ಅಂದಾಜು ಪಟ್ಟಿಯಲ್ಲಿನ ಸಾಮಗ್ರಿ ಹಾಗೂ ನಿಯಮಬದ್ಧವಾಗಿ ಕಾಮಗಾರಿ ನಡೆಸದ ಕಾರಣ ಕೂಡಲೇ ಕಾಮಗಾರಿ ನಿಲ್ಲಿಸಬೇಕೆಂದು ಅಲ್ಲಿದ್ದ ಕೆಲಸಗಾರರಿಗೆ ತಾಕೀತು ಮಾಡಿದರು.

ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಸಾರಿಗೆ ನಿಗಮದ ಅಭಿಯಂತರರಾಗಲಿ, ಗುತ್ತಿಗೆದಾರನಾಗಲಿ ಯಾರೂ ಇಲ್ಲದೆ ಕೇವಲ ಮನಬಂದಂತೆ ನಿಯಮ ಹಾಗು ಕಾನೂನು ಬಾಹಿರವಾದ ಕಾಮಗಾರಿ ನಡೆಸುತ್ತಿರುವುದಕ್ಕೆ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದರಲ್ಲದೆ ಅಭಿಯಂತರರು ಹಾಗು ಗುತ್ತಿಗೆದಾರರು ಆಗಮಿಸುವವರೆಗೂ ಕಾಮಗಾರಿ ನಡೆಸದಂತೆ ಖಡಕ್ ತಾಕೀತು ಮಾಡಿದರು.

ರಸ್ತೆ ನಿರ್ಮಾಣಕ್ಕೂ ಮುಂಚೆ ಚರಂಡಿ ವ್ಯವಸ್ಥೆ ಇಲ್ಲ. ಮಳೆ ನೀರು ಹಾಗು ಬಸ್ ನಿಲ್ದಾಣದೊಳಗಡೆಯಿರುವ ಶೌಚಾಲಯದ ನೀರು ರಸ್ತೆಗಿಳಿದು ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತೆ. ಈ ಎಲ್ಲಾ ತಾಂತ್ರಿಕತೆ ಮರೆತು ಕೆಲಸ ನಡೆಸುತ್ತಿರುವುದನ್ನು ಶಾಸಕರು ಖಂಡಿಸಿದರು.

ಈಗಾಗಲೇ ರಬಕವಿ ಬಸ್ ನಿಲ್ದಾಣದಲ್ಲಿ 50 ಲಕ್ಷ ರೂ.ಗಳ ಸಿಮೆಂಟ್ ರಸ್ತೆ ಕಾಮಗಾರಿ ನಡೆಸಿದ್ದು, ಅದೂ ಕೂಡ ಕಳಪೆ ಮಟ್ಟದ್ದಾಗಿದೆ. ಇಂತಹ ಕಾಮಗಾರಿ ನಡೆಸುವಲ್ಲಿ ಸಾರಿಗೆ ಇಲಾಖೆಯ ಹಸ್ತಕ್ಷೇಪ ಎದ್ದು ಕಾಣುತ್ತಿದ್ದು, ಸಾರಿಗೆ ಸಚಿವರು ಇಂತಹ ಕಳಪೆ ಕಾಮಗಾರಿಗಳನ್ನು ವೀಕ್ಷಿಸಿ ಮರು ಕಾಮಗಾರಿಗೆ ತಯಾರಾಗಬೇಕು.

ಅಲ್ಲದೆ ಬನಹಟ್ಟಿಯ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪಾರದರ್ಶಕ ಹಾಗೂ ಕಾನೂನು ಬದ್ಧವಾಗಿ ನಡೆಸುವಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಶಾಸಕ ಸವದಿ ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಪರಶುರಾಮ ಬಸವ್ವಗೋಳ, ರಾಜು ಅಂಬಲಿ, ಕುಮಾರ ಕದಮ, ಆನಂದ ಕಂಪು, ರಮೇಶ ಮಂಡಿ, ಅಮಿತ ಹಟ್ಟಿ, ಶೇಖರ ಹಕ್ಕಲದಡ್ಡಿ ಸೇರಿದಂತೆ ಅನೇಕರಿದ್ದರು.

ABOUT THE AUTHOR

...view details