ಬಾಗಲಕೋಟೆ: ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ಬೆಳಕಿಗೆ ಬಂದಿದೆ. ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಗ್ರಾಮದಲ್ಲಿ ನಡೆದಿದೆ. ಕಮತಗಿ ಗ್ರಾಮದ ಬಳಿರುವ ಮಲಪ್ರಭಾ ನದಿಯ ಬಳಿ ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳ ಶವ ಪತ್ತೆಯಾಗಿದೆ. ಮೃತರು ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಸಂಗಮ್ಮ ಸುರೇಶ ಮಾಸರೆಡ್ಡಿ (45), ಐಶ್ವರ್ಯ (23) ಸೌಂದರ್ಯ (19) ಎಂದು ಗುರುತಿಸಲಾಗಿದೆ.
ತಾಯಿ ಮತ್ತು ಹೆಣ್ಮಕ್ಕಳಿಬ್ಬರು ಆತ್ಮಹತ್ಯೆ: ಸೂಳೇಭಾವಿ ಗ್ರಾಮದ ಸಂಗಮ್ಮ ಮತ್ತು ಸುರೇಶ ಮಾಸರೆಡ್ಡಿ ದಂಪತಿಗೆ ಮದುವೆಯಾಗಿ ಸುಮಾರು ವರ್ಷಗಳೇ ಕಳೆದಿವೆ. ಈ ದಂಪತಿಗೆ ಇಬ್ಬರು ಮದುವೆ ವಯಸ್ಸಿಗೆ ಬಂದಿರುವ ಹೆಣ್ಣಮಕ್ಕಳಿದ್ದರು. ಆದರೆ ಮನೆಯ ಯಜಮಾನ ಸುರೇಶ್ ಕುಡಿದು ಬಂದು ಪ್ರತಿ ನಿತ್ಯ ಗಲಾಟೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇದರಿಂದ ತಾಯಿ ಮತ್ತು ಮಕ್ಕಳಿಬ್ಬರು ಬೇಸತ್ತು ಹೋಗಿದ್ದರು. ಇಂದು ಸಹ ಸುರೇಶ್ ಕುಟುಂಬಸ್ಥರೊಡನೆ ಜಗಳವಾಡಿದ್ದಾನೆ. ಇದರಿಂದ ಮನನೊಂದ ತಾಯಿ ಮತ್ತು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಈ ಕಾರಣಕ್ಕೆ ಅವರು ಕತ್ತಲು ಆಗುತ್ತಿದ್ದಂತೆ ಮಲಪ್ರಭಾ ನದಿಯ ಬಳಿ ತೆರಳಿದ್ದಾರೆ. ಇತ್ತ ಇವರು ಮನೆ ಬಳಿ ಕಾಣದ ಹಿನ್ನೆಲೆ ಸಂಬಂಧಿಕರು ಅನುಮಾನಗೊಂಡು ಹುಡುಕಾಟ ಆರಂಭಿಸಿದ್ದರು. ಇವರನ್ನು ನೋಡಿದ ಕೆಲವರು ಮಲಪ್ರಭಾ ನದಿ ಬಳಿ ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ನದಿ ಸೇತುವೆ ಮೇಲೆ ಹಾದು ಹೋಗುವವರು ಸಹ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು.