ಬಾಗಲಕೋಟೆ: ಕೋವಿಡ್ ನಿಂದ ಮೃತನಾದ ವ್ಯಕ್ತಿಯ ಸಹೋದರನ ಜೊತೆ ತೇರದಾಳ ಶಾಸಕ ಸಿದ್ದು ಸವದಿ ಉದ್ದಟತನದ ಮಾತುಗಳು ಆಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಓದಿ: ಚಾಮರಾಜನಗರದ ಆಸ್ಪತ್ರೆ ದುರಂತ: ಸಂತ್ರಸ್ತರಿಗೆ ಕಿಚ್ಚ ಚಾರಿಟಬಲ್ ಟ್ರಸ್ಟ್ ನೆರವು
ತಮ್ಮ ಕ್ಷೇತ್ರದ ಮತದಾರ ಹಾಗೂ ಬಿಜೆಪಿ ಪಕ್ಷದ ಅಭಿಮಾನಿಗೆ ಸಮಾಧಾನ ಹೇಳುವ ಬದಲು ನಾಲಾಯಕ್ ಎಂದು ಆವಾಜ್ ಹಾಕಿರುವ ಘಟನೆ ನಡೆದಿದೆ. ಆಸಂಗಿ ಗ್ರಾಮದ ಅಶೋಕ ಗಾಯಕವಾಡ ಎಂಬುವನಿಗೆ ಶಾಸಕ ಸಿದ್ದು ಸವದಿ ನಾಲಾಯಕ್ ಎಂದು ಅವಾಜ್ ಹಾಕಿ, ಪೋನ್ ಕಟ್ ಮಾಡಿದ್ದಾರೆ.
ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿ ಶಾಸಕರಿಗೆ ಯುವಕ ಫೋನ್ ಮಾಡಿ, ಆಕ್ಸಿಜನ್ ಕೊರೆತೆಯಿಂದ ನಮ್ಮ ಸಹೋದರ ಮೃತಪಟ್ಟಿದ್ದಾನೆ. ನೀವು ಶಾಸಕರು ಇದ್ದೀರಿ, ಆಕ್ಸಿಜನ್ ವ್ಯವಸ್ಥೆ ಮಾಡಬೇಕು, ಸರ್ಕಾರಿ ದವಾಖಾನೆ ಮುಂದೆ ಕೂರಬೇಕು, ಆಸ್ಪತ್ರೆಗೆ ಆಕ್ಸಿಜನ್ ಇಲ್ಲದೇ ಪ್ರತಿ ದಿನ ಸಾಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಮನೆಯಲ್ಲಿ ಕೂರಬೇಕು ಅಂತ ನಿಮ್ಮನ್ನು ಆರಿಸಿ ಕಳಿಸಿಲ್ಲ ಎಂದ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಶಾಸಕ ಸಿದ್ದು ಸವದಿ ಗರಂ ಆಗಿ, ನಾಲಾಯಕ್ ಇಡು ಫೋನ್ ದೊಡ್ಡ ಕಿಸಾಮತಿ ಮಾಡುತಿಯಾ ಎಂದು ಬೆದರಿಸಿ, ಶಾಣ್ಯಾ ಅದಿ ಫೋನ್ ಇಡು ಎಂದು ಶಾಸಕ ಗರಂ ಆಗಿದ್ದಾರೆ.
ಸಂಜಯ್ ದೊಂಡಿಬಾಗ (41) ಕೋವಿಡ್ ನಿಂದ ಶನಿವಾರ ಮೃತಪಟ್ಟಿದ್ದರು. ಆಕ್ಸಿಜನ್ ಬೆಡ್ ಸಿಗದೇ ಮೃತಪಟ್ಟಿರುವ ಸಂಜಯ್ನನ್ನು, ಸಹೋದರ ಅಶೋಕ್ ಹೇಗಾದರೂ ಮಾಡಿ ಉಳಿಸಿಕೊಳ್ಳುಬೇಕು ಎಂದು ಚಿಕಿತ್ಸೆಗಾಗಿ ಜಮಖಂಡಿ, ಬಾಗಲಕೋಟೆ, ವಿಜಯಪುರ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ.
ಈ ದುಃಖದಲ್ಲಿಯೂ, ಶಾಸಕ ಸಿದ್ದು ಸವದಿಗೆ, ದೂರವಾಣಿ ಮೂಲಕ ಕರೆ ಮಾಡಿ, ಇತರರಿಗೂ ಈ ರೀತಿ ಅನ್ಯಾಯ ವಾಗದಂತೆ ಮಾಹಿತಿ ನೀಡಿ, ಆಕ್ಸಿಜನ್ ಒದಗಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ. ಮೊದಲೇ ದುಃಖದಲ್ಲಿ ಇದ್ದ ಕುಟುಂಬದಕ್ಕೆ ಸ್ವಾಂತನ ಹೇಳುವುದರ ಬದಲು, ಈ ರೀತಿ ಆವಾಜ್ ಹಾಕಿರುವುದು ಎಷ್ಟು ಸರಿ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.