ಬಾಗಲಕೋಟೆ:ಉತ್ತರ ಕರ್ನಾಟಕದಲ್ಲಿ ದಟ್ಟವಾದ ಅರಣ್ಯುವಿರುವುದಿಲ್ಲ. ಹೀಗಾಗಿ ಬರಡು ಪ್ರದೇಶದಲ್ಲಿ ಚಿರತೆ ಕಂಡು ಬರುವುದಿಲ್ಲ. ಆದರೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ನಾಯಿಯೊಂದರ ಮೇಲೆ ಚಿರತೆ ದಾಳಿ ಮಾಡಿ ತಿಂದು ಹಾಕಿರುವ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಜಮಖಂಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ನಿಂಗಪ್ಪ ಹೆಗಡೆಯವರ ಸಾಕು ನಾಯಿ ಮೇಲೆ ಮೇ 27ರಂದು ರಾತ್ರಿ ಚಿರತೆ ದಾಳಿ ಮಾಡಿ ಅರ್ಧ ತಿಂದು ಹಾಕಿ ಹೋಗಿತ್ತು. ಈ ಕುರಿತು ಅರಣ್ಯಾಧಿಕಾರಿಗಳು ಮೇ 28ರಂದು ಚಿರತೆಯ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿ, ಕ್ಯಾಮರಾ ಟ್ರ್ಯಾಕ್ ಮೂಲಕ ಚಿರತೆಯನ್ನು ಪತ್ತೆ ಹಚ್ಚಿದರು.
ಚಿರತೆಗೆ ಸೆರೆಗೆ ಬಲೆ: ತಾಲೂಕಿನಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಚಿರತೆಯನ್ನು ಸೆರೆ ಹಿಡಿಯಲು ಬೀಳಗಿ-ಗೋಕಾಕ್-ಭೀಮಗಡದಿಂದ 3 ಬೋನ್ಗಳನ್ನು ತರಿಸಿ ಚಿರತೆ ಬರುವ ಸ್ಥಳಗಳಲ್ಲಿ ಅಳವಡಿಸಿದ್ದಾರೆ.
20 ಜನ ಸಿಬ್ಬಂದಿ ನಿಯೋಜನೆ:ಕುಂಬಾರಹಳ್ಳ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಚುರುಕಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಚಿರತೆಯ ಚಲನವಲನಗಳನ್ನು ಅವಲೋಕಿಸಿ ಸೆರೆ ಹಿಡಿಯುವ ನಿಟ್ಟಿನಲ್ಲಿ ಬೀಳಗಿ, ಮುಧೋಳ, ಜಮಖಂಡಿ ಹಾಗೂ ಬಾಗಲಕೋಟೆ ಅರಣ್ಯ ಇಲಾಖೆಗಳಿಂದ ಸುಮಾರು 15ರಿಂದ 20 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.