ಬಾಗಲಕೋಟೆ :ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದೆ. ವಿದ್ಯಾರ್ಥಿಗಳು ಹಿಜಾಬ್ ಈಗೋ ಬಿಟ್ಟು ಪರೀಕ್ಷೆಗೆ ಹಾಜರಾಗಿ ಎಂದು ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಾಕಷ್ಟು ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಹಾಗೂ ಸರ್ಕಾರದ ಅಧಿಸೂಚನೆಯನ್ನು ತುಂಬ ಶಿಸ್ತಿನಿಂದ ಅನುಸರಿಸಿದ್ದಾರೆ ಎಂದರು.
ಅಹಂ ಬಿಟ್ಟು ಪರೀಕ್ಷೆಗೆ ಹಾಜರಾಗಿ: ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಎಚ್ಚರಿಕೆ ಆದರೆ, ಕೆಲವೇ ಕೆಲವು ಮಕ್ಕಳು ಮಾತ್ರ ವಿರೋಧಿಸಿದ್ದಾರೆ. ಆ ವಿದ್ಯಾರ್ಥಿಗಳು ಪರೀಕ್ಷೆಯ ಅನಿವಾರ್ಯತೆ ಅರ್ಥ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮತ್ತೆ ಮತ್ತೆ ಹೇಳುತ್ತೇನೆ. ತಮ್ಮ ಅಹಂ ಬಿಡಿ. ಬೇರೆಯವರಿಗಾಗಿ ನೀವು ಬಲಿಪಶು ಆಗಬೇಡಿ ಎಂದು ಸಚಿವರು ಸಲಹೆ ನೀಡಿದರು.
ಎಸ್ಎಸ್ಎಲ್ಸಿಯಲ್ಲಿ ಸುಮಾರು 17 ಲಕ್ಷ ಮಕ್ಕಳ ಓದುತ್ತಿದ್ದಾರೆ. ಆ ಮಕ್ಕಳಲ್ಲಿ ನೂರು ಮಕ್ಕಳು ಶಾಲೆ ಬಹಿಷ್ಕಾರ ಮಾಡಿರಬಹುದು. ನಾವು ಸಾಕಷ್ಟು ಮನವಿ ಮಾಡಿದ್ದೇವೆ. ಸಿಎಂ ಕೂಡ ಮನವಿ ಮಾಡಿದ್ದಾರೆ. ಕುದುರೆಯನ್ನ ಎಳೆದುಕೊಂಡು ಹೋಗಬಹುದು. ಆದ್ರೆ, ನೀರು ಕುಡಿಸೋಕೆ ಆಗಲ್ಲ. ಗೈರಾದವರಿಗೆ ಮರು ಪರೀಕ್ಷೆ ಇಲ್ಲ. ಅವರು ಒಂದು ತಿಂಗಳ ನಂತರ ನಡೆಯುವ ಪೂರಕ ಪರೀಕ್ಷೆಯನ್ನು ಬೇಕಾದರೆ ತೆಗೆದುಕೊಳ್ಳಬಹುದು. ಅದನ್ನು ಹೊರತು ಪಡಿಸಿ ಬೇರೆ ಅವಕಾಶ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ನಾಳೆ 3,444 ಪರೀಕ್ಷಾ ಕೇಂದ್ರಗಳಲ್ಲಿ 8,74,000 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಎಲ್ಲ ಕೇಂದ್ರಗಳಲ್ಲಿ ವಿವಿಧ ಸ್ತರದ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸರ್ಕಾರದ ನಿಯಮಗಳ ಪ್ರಕಾರ, ಹೈಕೋರ್ಟ್ ಹೇಳಿದ ಪ್ರಕಾರ ಮಕ್ಕಳು ಪರೀಕ್ಷೆ ಬರೆಯುತ್ತಾರೆ ಎಂಬ ವಿಶ್ವಾಸವಿದೆ. ಈ ಬಾರಿ ಬಹು ಆಯ್ಕೆಯ ಪ್ರಶ್ನೆಗಳನ್ನ ಜಾಸ್ತಿ ಮಾಡಲಾಗಿದೆ. ಧೈರ್ಯವಾಗಿ ಪರೀಕ್ಷೆ ಬರೆಯಿರಿ. ನಿಮಗೆಲ್ಲ ಒಳ್ಳೆಯದಾಗುತ್ತದೆ ಎಂದು ಸಚಿವ ಬಿ. ಸಿ ನಾಗೇಶ್ ಶುಭ ಹಾರೈಸಿದರು.
ಇದನ್ನೂ ಓದಿ:SSLC ಪರೀಕ್ಷೆಗೆ ದಿನಗಣನೆ: ಎಕ್ಸಾಂ ಬರೆಯಲಿದ್ದಾರೆ 8,73,846 ವಿದ್ಯಾರ್ಥಿಗಳು