ಬಾಗಲಕೋಟೆ :ಬನಹಟ್ಟಿ ನಗರದ ಲಕ್ಷ್ಮೀ ನಗರದಲ್ಲಿರುವ ಏಕೈಕ ನೇಕಾರ ಚಟುವಟಿಕೆಗಳ ನೇಕಾರ ಭವನ ಅವ್ಯವಸ್ಥೆಯ ಗೂಡಾಗಿದ್ದು, ಕಾಟಾಚಾರಕ್ಕೆ ಉದ್ಘಾಟನೆಗೊಂಡು ಇದೀಗ ಹೇಳುವವರು ಕೇಳುವವರಿಲ್ಲದೆ ಅನಾಥವಾಗಿದೆ.
2016ರಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಬನಹಟ್ಟಿಯ ಲಕ್ಷ್ಮೀ ನಗರದಲ್ಲಿ ನೇಕಾರ ಭವನ ನಿರ್ಮಾಣಕ್ಕೆಂದು ಹಣ ಬಿಡುಗಡೆ ಮಾಡುವ ಮೂಲಕ 2017 ಡಿಸೆಂಬರ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಭವನ ಉದ್ಘಾಟನೆ ಸಹಿತ ಸ್ಥಳೀಯ ಎಸ್ಆರ್ಎ ಮೈದಾನದಲ್ಲಿ ನೇಕಾರ ಭವನ ಸಾಮೂಹಿಕವಾಗಿ ಉದ್ಘಾಟನೆಗೊಂಡಿತ್ತು.
ಉದ್ಘಾಟನೆಗೊಂಡು ಒಂದುವರೆ ವರ್ಷ ಕಳೆದರೂ ಇದು ಯಾವ ಇಲಾಖೆಗೆ ಸಂಬಂಧಿಸಿದ್ದು? ಇಲ್ಲಿನ ಕಾರ್ಯ ಚಟುವಟಿಕೆಗಳ ಕ್ರಿಯೆ ಏನು? ಎಂಬ ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ನೇಕಾರರು ತಮ್ಮ ಸಮಸ್ಯೆ, ಸಭೆ, ಸಹಾಯಕ್ಕಾಗಿ ನೇಕಾರರ ಸಂಗಮಕ್ಕೆ ನಿರ್ಮಿತಗೊಂಡಿರುವ ಈ ನೇಕಾರ ಭವನ ಇಂದಿಗೂ ಸಾರ್ವಜನಿಕ ಅನುಕೂಲಕ್ಕಾಗಿ ಕಾರ್ಯನಿರ್ವಹಿಸದಿರುವದು ವಿಪರ್ಯಾಸವೇ ಸರಿ.