ಬಾಗಲಕೋಟೆ:ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ವಿವಿಧ ಯೋಜನೆಗಳ ದುರಸ್ತಿಗೆ ಶ್ರೀಘ್ರವೇ ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಭರವಸೆ ನೀಡಿದರು.
ಇಂದು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಹಾನಿಯಾದ ಶಾಲೆ, ಅಂಗನವಾಡಿ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆಗಳು ಸೇರಿದಂತ ಎಲ್ಲ ಕಾಮಗಾರಿಗಳ ದುರಸ್ತಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿದರೆ ಶೀಘ್ರವೇ ಮಂಜೂರಾತಿ ನೀಡಲಾಗುವುದು ಎಂದರು.
ಮಾದಾಪೂರ ಗ್ರಾಮದ ಈ ಕ್ವಾರಿ (ಕಣವಿ) ಘಟಪ್ರಭಾ ನದಿಯಿಂದ ನೀರು ತುಂಬಿಸಿದರೆ 6 ಗ್ರಾಮಗಳಿಗೆ ತುಂಬಾ ಅನುಕೂಲವಾಗಲಿದೆ. ಈ ಗ್ರಾಮಗಳಿಗೆ ಬೇಸಿಗೆ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಕ್ವಾರಿ ತುಂಬಿದರೆ ನೀರಿನ ಕೊರತೆ ನೀಗಿಸಬಹುದು ಎಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಅವರು ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತಂದರು.
ಢವಳೇಶ್ವರ ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್‍ವೆಲ್ ವೀಕ್ಷಿಸಿದಾಗ ಅಲ್ಲಿರುವ ಪ್ಯಾನೆಲ್ ಬೋರ್ಡ, ಪಂಪ್ಸೆಟ್, ವಿದ್ಯುತ್ ಕಂಬ ಹಾಗೂ ಕ್ಯೂಬಿಕ್ ಮೀಟರ್ ಹಾಳಾಗಿರುವದನ್ನು ತಿಳಿಸಿದರು. ಆಗ ಕ್ವಾರಿ ತುಂಬಿಸಲು ಹೊಸ ಪ್ರಸ್ತಾವನೆ ಮತ್ತು ಜಾಕವೆಲ್ ದುರಸ್ಥಿಗೆ ಪ್ರಸ್ತಾವನೆ ಸಲ್ಲಿಸಿದರೆ, ದುರಸ್ತಿಗೆ ಶೀಘ್ರವೇ ಮಂಜೂರಾತಿ ನೀಡುವುದಾಗಿ ಅತೀಕ್ ತಿಳಿಸಿದರು.
ಜಂಬಗಿ ಬಿಕೆ, ಜಂಬಗಿ ಕೆಡಿ, ಮಿರ್ಜಿ ಗ್ರಾಮದ ಶಾಲೆ ಹಾಗೂ ಅಂಗನವಾಡಿ ಕಟ್ಟಡ, ಹಳಿಂಗಳಿಯ ಎಂವಿಎಸ್ ಜಾಕವೆಲ್, ತಮದಡ್ಡಿ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕ ಮತ್ತು ಬಿದ್ದ ಮನೆಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಅಲ್ಲದೇ ಯಾದವಾಡ ರಸ್ತೆಯನ್ನು ಸಹ ಪರಿಶೀಲಿಸಿದರು. ಸ್ಥಳೀಯ ಸಮಸ್ಯೆಗಳ ಬಗ್ಗೆ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಿದರು.