ಬಾಗಲಕೋಟೆ: ಯಾವುದೇ ಖಾತೆ ನೀಡುವಂತೆ ಲಾಬಿ ನಡೆಸಿಲ್ಲ. ಪಕ್ಷದ ಮುಖಂಡರು ಯಾವ ಖಾತೆ ನೀಡಿದ್ರೂ ನಿಭಾಯಿಸುತ್ತೇನೆ ಎಂದು ನೂತನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಸಿಡಿ ವಿಚಾರ ಮಾತನಾಡಲ್ಲ, ನಾನು ಪಕ್ಷದ ಪ್ರಾಮಾಣಿಕ ಕಾರ್ಯಕರ್ತ: ಮುರುಗೇಶ್ ನಿರಾಣಿ
ನಾನು ಪಕ್ಷದ ವಿರುದ್ಧ ಯಾವುದೇ ಕಾರಣಕ್ಕೂ ಮಾತನಾಡಲ್ಲ. ಪಕ್ಷದ ಮುಖಂಡರು ಮುಂದಿನ ಚುನಾವಣೆಯಲ್ಲಿ ಬೀಳಗಿ ಮತಕ್ಷೇತ್ರಕ್ಕೆ ಸ್ಪರ್ಧೆ ಮಾಡುವುದು ಬೇಡ ಎಂದರೂ ಕೇವಲ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿರುವ ನಿರಾಣಿ ಶುಗರ್ಸ್ ಗ್ರೂಪ್ನ ಕೇದಾರನಾಥ ಸಕ್ಕರೆ ಕಾರ್ಖಾನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಮಾತನಾಡಿದರು. ಕೆರಕಲಮಟ್ಟಿ ಗ್ರಾಮ ಇಡೀ ದೇಶದ ಗಮನ ಸೆಳೆಯುತ್ತಿರುವಾಗ ಪಂಚಮಸಾಲಿ ಪೀಠದಿಂದ ನಡೆದ ಪಾದಯಾತ್ರೆ, ಸಿಡಿ ವಿಚಾರ ಸೇರಿದಂತೆ ಇತರ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.
ನಿರಾಣಿ ಫೌಂಡೇಷನ್ ಗ್ರೂಪ್ ದೇಶದಲ್ಲಿಯೇ ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ಕಂಪನಿಗಳಲ್ಲಿ ಒಂದಾಗಿದೆ. ಸಕ್ಕರೆ ಉತ್ಪಾದನೆಯಲ್ಲಿ ದಕ್ಷಿಣ ಭಾರತದಲ್ಲಿಯೇ ಮೊದಲೇ ಸ್ಥಾನದಲ್ಲಿ ಇದ್ದೇವೆ. ಇಥಿನಾಲ್ ಉತ್ಪಾದನೆ ಮಾಡುವಲ್ಲಿ ಇಡೀ ದೇಶಕ್ಕೆ ಅಷ್ಟೇ ಅಲ್ಲ, ಏಷ್ಯಾ ಖಂಡದಲ್ಲೇ ಮೊದಲನೇ ಸ್ಥಾನದಲ್ಲಿ ಇದ್ದೇವೆ. 8 ಲಕ್ಷ 50 ಸಾವಿರ ಲೀಟರ್ ಉತ್ಪಾದನೆ ಘಟಕಕ್ಕೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ ಎಂದು ನಿರಾಣಿ ಮಾಹಿತಿ ನೀಡಿದ್ದಾರೆ.