ಬಾಗಲಕೋಟೆ: ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಮೂಲದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಬಾಗಲಕೋಟೆಯಲ್ಲಿ ಮತ್ತೋರ್ವ ಸಿಸಿಬಿ ವಶಕ್ಕೆ
ಭಾನುವಾರ ನಡೆಯಬೇಕಿದ್ದ ಎಫ್ಡಿಎ ಹಾಗೂ ಎಸ್ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಹಿನ್ನೆಲೆ ಪರೀಕ್ಷೆ ರದ್ದುಗೊಂಡಿದ್ದು, ಈ ಪ್ರಕರಣದಲ್ಲಿ ಬಾಗಲಕೋಟೆ ಮೂಲದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೀಳಗಿ ತಾಲೂಕಿನ ಬೂದಿಹಾಳ ಗ್ರಾಮದ ನಿವಾಸಿ ರಮೇಶ್ ಹೆರಕಲ್ ಸಿಸಿಬಿ ವಶದಲ್ಲಿರುವ ಆರೋಪಿ ಎಂದು ತಿಳಿದುಬಂದಿದೆ. ಈತ ಕೆಪಿಎಸ್ಸಿಯಲ್ಲಿ ಎಸ್.ಡಿ.ಎ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಇವನ ಪಾತ್ರ ಇದೆ ಎಂದು ಸಿಸಿಬಿ ಪೊಲೀಸರು ಶಂಕಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯ ಬಹಿರಂಗಗೊಂಡ ಬೆನ್ನಲ್ಲೇ ಹಿರೇಪಡಸಲಗಿ ಗ್ರಾಮಕ್ಕೆ ಆಗಮಿಸಿದ್ದ ರಮೇಶ್, ಐವರು ಸ್ನೇಹಿತರೊಂದಿಗೆ ವಾಸವಾಗಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು, ರಮೇಶ್ ಹಾಗೂ ಆತನ ಸ್ನೇಹಿತರನ್ನೂ ಸಹ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ತನಿಖೆ ನಂತರ ನಿಜಾಂಶ ಬೆಳಕಿಗೆ ಬರಲಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.