ಬಾಗಲಕೋಟೆ:ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ರೈತರು ಬೋಟ್ ಮೂಲಕ ಕಬ್ಬು ತುಂಬಿಸಿದ ಟ್ರ್ಯಾಕ್ಟರ್ ಸಾಗಿಸಿ ಗಮನ ಸೆಳೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ, ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮ ಬಳಿ ಗುಹೇಶ್ವರ ನಡುಗಡ್ಡೆ ಇದೆ. ಈ ದಡದಿಂದ ಆ ಕಡೆಗೆ ಬೋಟ್ನಲ್ಲಿಯೇ ಟ್ರ್ಯಾಕ್ಟರ್ ಮೂಲಕ ಸಾಗಿಸಲಾಗಿದೆ.
ಪ್ರತೀ ವರ್ಷ ಕೃಷ್ಣಾ ನದಿಯಲ್ಲಿ ಆರು ತಿಂಗಳ ಕಾಲ ನೀರು ನಿಲ್ಲುತ್ತದೆ. ಇದರಿಂದ ಈ ಪ್ರದೇಶ ನಡುಗಡ್ಡೆಯಾಗುತ್ತದೆ. ನಡುಗಡ್ಡೆ ಪ್ರದೇಶದಿಂದ ಕಾರ್ಖಾನೆಗೆ ಕಬ್ಬು ಸಾಗಿಸಲು ರೈತರು ಪತ್ರಿ ವರ್ಷ ಹರಸಾಹಸ ಪಡಬೇಕಾಗುತ್ತದೆ. ಎರಡು ಬೋಟ್ ಮೂಲಕ ಕಬ್ಬಿನ ಟ್ರ್ಯಾಕ್ಟರ್ ಸಾಗಿಸಲು ರೈತರು ವಿಭಿನ್ನ ಸಾಹಸ ಮಾಡುವ ಮೂಲಕ ಇತಿಹಾಸ ಬರೆದಿದ್ದಾರೆ. ಸುಮಾರು 5 ಟನ್ ಭಾರದ ಕಬ್ಬನ್ನು ಟ್ರ್ಯಾಕ್ಟರ್ನಲ್ಲಿ ಏರಿಸಿದ್ದಾರೆ. ಎರಡು ಬೋಟ್ ಬಳಸಿ ಕಬ್ಬಿಣದ ಎಂಗಲ್ ಹಾಕಿ ಅದರ ಮೇಲೆ ಟ್ರ್ಯಾಕ್ಟರ್ ನಿಲ್ಲಿಸಿದ್ದಾರೆ.
ನಡುಗಡ್ಡೆಯಲ್ಲಿ ಸುಮಾರು 300 ಕುಟುಂಬಗಳ 700 ಎಕರೆ ಜಮೀನು ಇದೆ. ಪ್ರತೀ ವರ್ಷ ಬೋಟ್ನಲ್ಲೇ ಲೋಡ್ ಮಾಡಿಕೊಂಡು ಕಬ್ಬು ಸಾಗಿಸುವುದು ಅನಿವಾರ್ಯವಾಗಿದೆ. ಆದರೆ, ಇಷ್ಟು ದಿನ ಒಂದೇ ಬೋಟ್ನಲ್ಲಿ ಟ್ರ್ಯಾಕ್ಟರ್ ಸಾಗಿಸುತ್ತಿದ್ದ ರೈತರು, ಈ ಬಾರಿ ಕಡಿಮೆ ಹಣದಲ್ಲಿ ಹೆಚ್ಚು ಕಬ್ಬು ಸಾಗಿಸುವುದಕ್ಕೆ ಯೋಚನೆ ಮಾಡಿ, ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ.